ಬಂಟ್ವಾಳ: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಅಂಗವಾಗಿ ದೃಢಕಲಶ ಆಗಬೇಕಿರುವುದರಿಂದ ಡಿಸೆಂಬರ್ 28ರಿಂದ ಫೆ. 17ರವರೆಗೆ ಸಾರ್ವಜನಿಕರಿಗೆ ದೇವರ ದರ್ಶನ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಧಾರ್ಮಿಕ ಕಾರ್ಯಕ್ರಮದ ಸಿದ್ಧತೆ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ಪೊಳಲಿಯಲ್ಲಿ ಸೋಮವಾರ ನಡೆಯಿತು.
ಪೊಳಲಿಯಲ್ಲಿ ಭಕ್ತರಿಗೆ ದೇವರ ದರ್ಶನ ಇಲ್ಲ ಕೋವಿಡ್ನಿಂದಾಗಿ ಬ್ರಹ್ಮಕಲಶೋತ್ಸವ ನಡೆದ ಬಳಿಕ ಜೀರ್ಣೋದ್ಧಾರದ ಉಳಿದ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೃಢಕಲಶ ಬಾಕಿ ಇತ್ತು. ಪ್ರಸ್ತುತ ಸಾನ್ನಿಧಾನದಲ್ಲಿ ಸಣ್ಣಪುಟ್ಟ ಕೆಲಸ ನಡೆಸಿ, ದೃಢಕಲಶ ಮಾಡಬೇಕಾಗಿದೆ. ಹೀಗಾಗಿ ದೇವರ ದರ್ಶನ ಈ ಸಮಯದಲ್ಲಿ ಇರುವುದಿಲ್ಲ. ಈ ಅವಧಿಯಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಸೀಮೆಯ ಒಳಗೆ ವಿಶೇಷ ಕಾರ್ಯಕ್ರಮ ಮಾಡುವುದಾದರೆ ದೇವರಲ್ಲಿ ಪ್ರಾರ್ಥಿಸಿ ಮುಂದುವರೆಯಬಹುದು.
ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ರಮಾನಾಥ ರೈ, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಪೊಳಲಿ ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯು.ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಮೊದಲಾದವರು ಸೋಮವಾರ ನಡೆದ ದೃಢಕಲಶದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಓದಿ:ಶಾಲೆ ಪುನಾರಂಭ, ಎಪಿಎಂಸಿ ಸೆಸ್ ಕಡಿತ ಸೇರಿದಂತೆ ಇಂದಿನ ಸಂಪುಟ ಸಭೆಯ ತೀರ್ಮಾನಗಳು ಹೀಗಿವೆ
ಇದೇ ವೇಳೆ ಭಕ್ತರಿಂದ ಫೆ. 17ರವರೆಗೆ ಬೆಳಗ್ಗೆಯಿಂದ ಸಂಜೆವರೆಗೂ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ಭಜನಾ ಸೇವೆ ನಡೆಯಲಿದೆ ಎಂದು ಸಂಘಟಕ ಪೊಳಲಿ ವೆಂಕಟೇಶ ನಾವಡ ತಿಳಿಸಿದ್ದಾರೆ. ಕ್ಷೇತ್ರದ ಕೃಷ್ಣ ತಂತ್ರಿ ಹಾಗೂ ಸುಬ್ರಹ್ಮಣ್ಯ ತಂತ್ರಿ, ವೇಂಕಟೇಶ್ ತಂತ್ರಿಯವರ ನೇತೃತ್ವದಲ್ಲಿ ದೇವಳದ ಅರ್ಚಕ ಮಾಧವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್, ವಿಷ್ಣು ಮೂರ್ತಿ ನಟ್ಟೋಜ, ಮಾಧವ ಮಯ್ಯ ಹಾಗೂ ದೇವಳದ ಸಿಬ್ಬಂದಿ ಸಹಕಾರದಲ್ಲಿ ಸೋಮವಾರ ವಿಧಿ ವಿಧಾನಗಳು ನೆರವೇರಿದವು.