ಬಂಟ್ವಾಳ: ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಉದ್ದೇಶದಿಂದ 2000ನೇ ಇಸವಿಯಲ್ಲಿ ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಕೈಕುಂಜೆಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಶಂಕುಸ್ಥಾಪನೆ ಮಾಡಿದ್ದರು. ಅದಾದ ಬಳಿಕ ಹಲವು ಪ್ರಯತ್ನಗಳು ನಡೆದರೂ ಭವನ ನಿರ್ಮಾಣಕ್ಕೆ ಅಡ್ಡಿಯಾಗುತ್ತಿತ್ತು. ಈಗ ಕಟ್ಟಡ ನಿರ್ಮಾಣವಾದರೂ ಕೊನೇ ಕ್ಷಣಕ್ಕೆ ಹಣಕಾಸಿನ ಅಡ್ಡಿಯಿಂದ ಸಮಸ್ಯೆ ಆಗುತ್ತಿದೆ.
ಬಂಟ್ವಾಳ: ಕನ್ನಡ ಭವನ ನಿರ್ಮಾಣಕ್ಕೆ ಕೊರೊನಾ ಕರಿಛಾಯೆ ತಾಲೂಕು ಕಸಾಪ ಅಧ್ಯಕ್ಷ ಬಿ. ಮೋಹನ್ ರಾವ್ ಅವರ ನೇತೃತ್ವದಲ್ಲಿ ಕನ್ನಡ ಭವನ ಕಟ್ಟಡ ನಿರ್ಮಾಣ ಸಮಿತಿ ಸಂಚಾಲಕ ಕೆ.ಗಂಗಾಧರ ಭಟ್ ಸಹಿತ ಕನ್ನಾಡಭಿಮಾನಿಗಳ ತಂಡ ಭವನ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಸರ್ಕಾರದ ಅನುದಾನ ಹಾಗೂ ಸಾರ್ವಜನಿಕರ ದೇಣಿಗೆಯೊಂದಿಗೆ ಕಟ್ಟಡವನ್ನು ನಿರ್ಮಿಸಿದರೂ ಕೊರೊನಾದಿಂದಾಗಿ ಪೂರ್ಣಗೊಳಿಸಲು ಹಿನ್ನಡೆಯಾಗಿದೆ.
8 ಸೆಂಟ್ಸ್ ಜಾಗದಲ್ಲಿ ಕನ್ನಡ ಭವನ ನಿರ್ಮಾಣಗೊಳ್ಳುತ್ತಿದ್ದು, ತಲಾ 2 ಸಾವಿರ ಚದರ ಅಡಿ ವಿಸ್ತೀರ್ಣದಂತೆ ಒಟ್ಟು 4 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಮೇಲಿನ ಅಂತಸ್ತಿನಲ್ಲಿ ಸುಮಾರು 250 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ, ವೇದಿಕೆ, ಗ್ರೀನ್ ರೂಮ್, ಶೌಚಾಲಯವನ್ನು ನಿರ್ಮಿಸಲಾಗಿದೆ. ತಳ ಅಂತಸ್ತಿನಲ್ಲಿ ಕಟ್ಟಡದ ನಿರ್ವಹಣೆಯ ವೆಚ್ಚವನ್ನು ಭರಿಸಲು 2 ಅಂಗಡಿ ಕೋಣೆಗಳನ್ನು ನಿರ್ಮಿಸಲಾಗಿದೆ. ಸದ್ಯಕ್ಕೆ ಸುಣ್ಣ ಬಳಿದು ಬಿಡಲಾಗಿದೆ. ಕಾಮಗಾರಿ ಪೂರ್ತಿಗೊಳಿಸಲು ಪರಿಷತ್ ಇನ್ನಷ್ಟು ಅನುದಾನವನ್ನು ಎದುರು ನೋಡುತ್ತಿದೆ.
ಕಸಾಪ ತಾಲೂಕು ಸಮಿತಿಯ ನಿಯೋಗ ಈಗಾಗಲೇ ಸರ್ಕಾರದ ಅನುದಾನಕ್ಕಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ಮಾಡಿದೆ. ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜತೆ ಮಾತನಾಡಿ ಅನುದಾನ ತರಿಸುವ ಬಗ್ಗೆ ಶಾಸಕರು ಭರವಸೆ ನೀಡಿದ್ದಾರೆ. ಕನ್ನಡಾಭಿಮಾನಿಗಳು ಇದನ್ನು ಎದುರು ನೋಡುತ್ತಿದ್ದಾರೆ. ಬಿ.ರಮಾನಾಥ ರೈ ಶಾಸಕರಾಗಿದ್ದ ವೇಳೆ ಶಾಸಕರ ಅಭಿವೃದ್ಧಿ ನಿಧಿಯಿಂದ ಅನುದಾನವಾಗಿ 5 ಲಕ್ಷ ರೂ.ಗಳನ್ನು ಒದಗಿಸಿದ್ದು, ಮಂಜೂರಾಗಿ ಬಂದಿದೆ. ಯು.ಟಿ.ಖಾದರ್ ಶಾಸಕರ ಅಭಿವೃದ್ಧಿ ನಿಧಿಯಿಂದ ಅನುದಾನವಾಗಿ 5 ಲಕ್ಷ ರೂ ಮಂಜೂರಾಗಿ ಹಣ ಬಿಡುಗಡೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು 10 ಲಕ್ಷ ರೂ ಒದಗಿಸಿದೆ. ಐವನ್ ಡಿಸೋಜಾ ಅವರು ವಿಧಾನಪರಿಷತ್ತು ಸದಸ್ಯರ ನಿಧಿಯಿಂದ 2 ಲಕ್ಷ ರೂ ಒದಗಿಸಿದ್ದು, ಮಂಜೂರಾತಿಗೆ ಕಳಿಸಿದ್ದಾರೆ. ಉಳಿದಂತೆ ಸಾರ್ವಜನಿಕರು, ದಾನಿಗಳು, ಕನ್ನಡಾಭಿಮಾನಿಗಳು ಸಹಕಾರ ನೀಡಿದ್ದಾರೆ. ಈ ಎಲ್ಲ ಸಹಕಾರದ ಫಲವಾಗಿಯೇ ಸುಮಾರು 60 ಲಕ್ಷ ರೂಗಳಷ್ಟು ಕೆಲಸ ಆಗಿದೆ. ಇನ್ನು ಕನಿಷ್ಠ 30 ರಿಂದ 40 ಲಕ್ಷ ರೂ ಕೆಲಸ ಬಾಕಿ ಇದ್ದು, ಈಗಾಗಲೇ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರುಗೊಂಡ 10 ಲಕ್ಷ ರೂ ಬಿಡುಗಡೆಗೆ ಬಾಕಿ ಇದೆ.
ಕಟ್ಟಡದ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು, ಪೀಠೋಪಕರಣ, ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಬೇಕಾಗಿದೆ. ಘೋಷಣೆಯಾಗಿರುವಂತೆ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂ. ಅನುದಾನ ಬಂದರೆ ಕೆಲಸ ಪುನಾರಂಭಿಸಬಹುದಾಗಿದೆ. ಕೊರೊನಾದಿಂದಾಗಿ ಜನರ ಬಳಿ ಹೋಗಲು ಸಾಧ್ಯವಿಲ್ಲ ಎಂದು ಕಸಾಪ ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್ ತಿಳಿಸಿದ್ದಾರೆ.