ಕರ್ನಾಟಕ

karnataka

ETV Bharat / state

ಮ್ಯಾನೇಜ್ಮೆಂಟ್ ಸೀಟ್‌ಗಳ ಅಕ್ರಮ ಹಣ ಗಳಿಕೆ.. ಐಟಿ ತನಿಖೆಯಿಂದ ಖಾಸಗಿ‌ ವೈದ್ಯಕೀಯ ಕಾಲೇಜುಗಳ ಬಣ್ಣ ಬಯಲು!

ದಾಳಿಯ ವೇಳೆ 15 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದೆ. 30 ಕೋಟಿ ರೂ. ಮೌಲ್ಯದ 81 ಕೆಜಿ ಚಿನ್ನಾಭರಣ, 40 ಕೆಜಿ ಬೆಳ್ಳಿ ಮತ್ತು ಡೈಮಂಡ್​ ಪತ್ತೆಯಾಗಿದೆ. ಶಿಕ್ಷಣ ಸಂಸ್ಥೆಗಳು ಆನ್​​ಲೈನ್ ಮೂಲಕ ವಂಚಿಸಿ ಹಣ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ..

ಐಟಿ ತನಿಖೆ
IT Department investigation

By

Published : Feb 19, 2021, 9:01 AM IST

ಮಂಗಳೂರು :ಉನ್ನತ ಶಿಕ್ಷಣಕ್ಕೆ ಪಾರದರ್ಶಕ ರೀತಿ ಸೀಟ್ ವಿತರಣೆ ಮಾಡಲು ನಡೆಸುತ್ತಿದ್ದ ನೀಟ್ ಪರೀಕ್ಷೆಯನ್ನು ವೈದ್ಯಕೀಯ ವಿದ್ಯಾಲಯಗಳ ಆಡಳಿತ ಮಂಡಳಿ ತಮ್ಮ ಹಿತಾಸಕ್ತಿಗಾಗಿ ಬುಡಮೇಲು ಮಾಡಿ ಅಕ್ರಮ ಹಣ ಗಳಿಕೆಗೆ ದಾರಿ ಮಾಡಿರುವ ಕೃತ್ಯ ಐಟಿ ತನಿಖೆಯಿಂದ ತಿಳಿದು ಬಂದಿದೆ. ಈ ಮೂಲಕ ಖಾಸಗಿ ವೈದ್ಯಕೀಯ ವಿದ್ಯಾಲಯಗಳ ಬಣ್ಣ ಬಯಲಾಗಿದೆ.

ಏನಿದು ದಂಧೆ?:ಖಾಸಗಿ ವೈದ್ಯಕೀಯ ವಿದ್ಯಾಲಯಗಳಲ್ಲಿ ಎಂಬಿಬಿಎಸ್, ಮೆಡಿಕಲ್, ಸ್ನಾತಕೋತ್ತರ ಪದವಿ ಪಡೆಯಲು ನೀಟ್ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮೂಲಕ ತಮ್ಮ ಕಾಲೇಜಿನ ಸೀಟ್​​ಗಳನ್ನು ಬ್ಲಾಕ್ ಮಾಡಿಸುತ್ತಾರೆ‌. ಆದರೆ, ಆ ಬಳಿಕ ಸೀಟ್ ಬ್ಲಾಕ್ ಮಾಡಿರುವ ವಿದ್ಯಾರ್ಥಿಗಳು ಮಾತ್ರ ಮೆರಿಟ್ ಸೀಟ್​​​ನಲ್ಲಿ ದೊರಕಿರುವ ಕಾಲೇಜಿನಲ್ಲಿಯೇ ತಮ್ಮ ಶಿಕ್ಷಣ ಮುಂದುವರಿಸುತ್ತಾರೆ.

ಆ ಬಳಿಕ ಬ್ಲಾಕ್‌ ಮಾಡಿರುವ ಸೀಟ್​​​ಗಳನ್ನು ಮ್ಯಾನೇಜ್ಮೆಂಟ್ ಸೀಟ್ ಎಂದು ಮೆರಿಟ್ ದೊರಕದ ಸಾಮಾನ್ಯ ಶ್ರೇಣಿಯ ವಿದ್ಯಾರ್ಥಿಗಳಿಗೆ ಜಾಸ್ತಿ ಹಣಕ್ಕೆ ನೀಡುತ್ತಾರೆ. ಬೆಂಗಳೂರು ಹಾಗೂ ಮಂಗಳೂರು ಸೇರಿ ಸುಮಾರು 9 ಖಾಸಗಿ ವೈದ್ಯಕೀಯ ವಿದ್ಯಾಲಯಗಳು ಈ ರೀತಿ ಅಕ್ರಮವಾಗಿ ಹಣ ಸಂಪಾದಿಸಿವೆ ಎಂಬ ವಿಚಾರ ಐಟಿ ಇಲಾಖೆ ತನಿಖೆಯಿಂದ ಬಯಲಾಗಿದೆ.

ಈ ದಂಧೆಯಲ್ಲಿ ಖಾಸಗಿ ವಿದ್ಯಾಲಯಗಳ ಆಡಳಿತ ಮಂಡಳಿ ಮಾತ್ರವಲ್ಲದೆ ಉಪನ್ಯಾಸಕರು, ಸಿಬ್ಬಂದಿ, ಮೆರಿಟ್ ವಿದ್ಯಾರ್ಥಿಗಳು ಹಾಗೂ ಮಧ್ಯವರ್ತಿಗಳು ಒಳಗೊಂಡಿದ್ದಾರೆ. ಈ ಬಗ್ಗೆ ವೈದ್ಯಕೀಯ ವಿದ್ಯಾಲಯಗಳು ಮಧ್ಯವರ್ತಿಗಳ ಮೂಲಕ‌ ಮ್ಯಾನೇಜ್ಮೆಂಟ್ ಸೀಟ್​​ಗಾಗಿ ವಿದ್ಯಾರ್ಥಿಗಳಿಂದ ಎಷ್ಟೆಷ್ಟು ಹಣ ಗಳಿಸಿದ್ದಾರೆಂದು ನೋಟ್ಸ್​ಬುಕ್, ಡೈರಿಗಳಲ್ಲಿ ಬರೆಯಲಾಗಿದೆ.

ಐಟಿ ಇಲಾಖೆಯ ದಾಖಲೆ ಪ್ರತಿ

ಅಲ್ಲದೆ ಒಂದು ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಪರೀಕ್ಷೆ ನಡೆಸುವಾಗ ಅಂಕ ನೀಡುವ ಬಗ್ಗೆ 1-2 ಲಕ್ಷ ರೂ.ವರೆಗೆ ಪ್ಯಾಕೇಜ್ ಕೂಡ ಇದೆ ಎಂಬಂತಹ ಮಹತ್ವದ ಮಾಹಿತಿಗಳು ಐಟಿ ಇಲಾಖೆಯಿಂದ ತಿಳಿದು ಬಂದಿದೆ.

ಈ ಮೂಲಕ ಎಲ್ಲಾ 9 ಸಂಸ್ಥೆಗಳು ಸುಮಾರು 402.78 ಕೋಟಿ ರೂ.ಗಳನ್ನು ಅಕ್ರಮವಾಗಿ ಸಂಪಾದಿಸಿವೆ. ಅಲ್ಲದೆ ಆ ಹಣವನ್ನು ವಿದ್ಯಾಲಯಗಳು ದತ್ತಿ ಉದ್ದೇಶವಲ್ಲದ (non charitable purpose) ಕಾರ್ಯಕ್ಕೆ ಬಳಕೆ ಮಾಡಿವೆ.

ಇದರ ನಡುವೆ ಒಂದು ಕಾಲೇಜು ಹಣವನ್ನು ಫ್ಲೈವುಡ್ ವ್ಯಾಪಾರಕ್ಕೆ ಬಳಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ‌ ಈ ಎಲ್ಲಾ ವೈದ್ಯಕೀಯ ವಿದ್ಯಾಲಯಗಳು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 12 ಎಎ ಸ್ಪಷ್ಟವಾಗಿ ಉಲ್ಲಂಘಿಸಿವೆ.

₹15 ಕೋಟಿ ಹಣ ವಶ :ದಾಳಿಯ ವೇಳೆ 15 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದೆ. 30 ಕೋಟಿ ರೂ. ಮೌಲ್ಯದ 81 ಕೆಜಿ ಚಿನ್ನಾಭರಣ, 40 ಕೆಜಿ ಬೆಳ್ಳಿ ಮತ್ತು ಡೈಮಂಡ್​ ಪತ್ತೆಯಾಗಿದೆ. ಶಿಕ್ಷಣ ಸಂಸ್ಥೆಗಳು ಆನ್​​ಲೈನ್ ಮೂಲಕ ವಂಚಿಸಿ ಹಣ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಉದ್ಯಮಿಗಳ ಮನೆ, ಕಚೇರಿಗಳಲ್ಲಿ ಸಾಕಷ್ಟು ದಾಖಲೆಗಳು ಪತ್ತೆಯಾಗಿವೆ. ಜೊತೆಗೆ ದಾಖಲೆ ಇಲ್ಲದ ಸುಮಾರು ₹2.9 ಕೋಟಿ ಹಣ ದೊರೆತಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ABOUT THE AUTHOR

...view details