ಕರ್ನಾಟಕ

karnataka

ETV Bharat / state

ಕೊರೊನಾ ಹೆಸರಲ್ಲಿ ಆಸ್ಪತ್ರೆಗಳಿಂದ ಹಣ ವಸೂಲಿ ಆರೋಪ: ಜನರ ಆಕ್ರೋಶ

ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ರೋಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ‌. ಮೃತದೇಹವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಆಸ್ಪತ್ರೆ ನಿಯಮದ ಪ್ರಕಾರ ಕೋವಿಡ್ ತಪಾಸಣೆ ನಡೆಸಬೇಕು ಎಂದು ಹೇಳಿ, 24 ಗಂಟೆಗಳ ಕಾಲ ವರದಿ ಕೊಡದೇ ಕುಟುಂಬಸ್ಥರನ್ನು ಸತಾಯಿಸಿ ಕೊನೆಗೆ ಹಣ ನೀಡುವಂತೆ ಸತಾಯಿಸಿದೆ.

munir katipalla
munir katipalla

By

Published : Jul 30, 2020, 9:59 AM IST

ಮಂಗಳೂರು (ದ.ಕ.):ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಬಡವರನ್ನು ದೋಚುತ್ತಿರುವ ಕತೆಗಳು ನಿತ್ಯವೂ ನಡೆಯುತ್ತಿದೆ. ಜೊತೆಗೆ ಕೊರೊನಾ ಸೋಂಕಿತರು ಮೃತಪಟ್ಟಲ್ಲಿ ಮೃತದೇಹವನ್ನೂ ಮನೆಯವರಿಗೆ ಕೊಡದೇ ಸತಾಯಿಸುತ್ತಿದೆ. ಇಂತಹ ಸಂಕಷ್ಟಕ್ಕೆ ಸಿಲುಕಿರುವ ಬಡವರು ತಮ್ಮ ಕಷ್ಟವನ್ನು ಯಾರಲ್ಲಿ ಹೇಳುವುದು ಎಂದು ತಿಳಿಯದೇ ಪರಿತಪಿಸುತ್ತಿದ್ದರೆ, ಜಿಲ್ಲಾಡಳಿತ, ಅಧಿಕಾರಿಗಳು ಮಾತ್ರ ಇದೆಲ್ಲವೂ ತಿಳಿದಿದ್ದರೂ ಜಾಣ ಕುರುಡರಂತೆ ನಟಿಸಿ ನುಣುಚಿಕೊಳ್ಳುತ್ತಿದ್ದಾರೆ.

ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಇಂತಹುದೇ ಒಂದು ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಮೃತದೇಹದ ಅಂತ್ಯಸಂಸ್ಕಾರದ ಹೆಸರಿನಲ್ಲಿ ಆಸ್ಪತ್ರೆ ಬಡವರನ್ನು ಸತಾಯಿಸಿ ಹಣ ದೋಚಿರುವ ಪ್ರಕರಣ ನಡೆದಿದೆ.

ಈ ಬಗ್ಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾಹಿತಿ ನೀಡಿ, ಡೆಂಘಿ ಜ್ವರದಿಂದ ತೀವ್ರವಾಗಿ ಅಸ್ವಸ್ಥರಾಗಿದ್ದ ವ್ಯಕ್ತಿಯೊಬ್ಬರನ್ನ ವೆನ್ಲಾಕ್ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿರುವುದರಿಂದ ಕುಟುಂಬಸ್ಥರು ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ಬೆಡ್ ಖಾಲಿ ಇರದಿರುವುದರಿಂದ ಅವರನ್ನು ನಗರದ ಎ.ಜೆ.ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಬಡವರನ್ನು ದೋಚುತ್ತಿರುವ ಖಾಸಗಿ ಆಸ್ಪತ್ರೆಗಳು

ಆದರೆ, ಅಲ್ಲಿ ದಾಖಲಿಸುವಷ್ಟರಲ್ಲಿ ರೋಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ‌. ಆ ತಕ್ಷಣವೇ ಮೃತದೇಹವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಆಸ್ಪತ್ರೆ ನಿಯಮದ ಪ್ರಕಾರ ಕೋವಿಡ್ ತಪಾಸಣೆ ನಡೆಸಬೇಕು ಎಂದು ಹೇಳಿದೆ. ಅದಾದ ಬಳಿಕ ಪೂರ್ತಿ 24 ಗಂಟೆಗಳ ಕಾಲ ವರದಿ ಕೊಡದೇ ಆಸ್ಪತ್ರೆಯವರರು ಸತಾಯಿಸಿ ಶವಾಗಾರದ ಬಳಿ ಕಾಯಿಸಿದ್ದಾರೆ.

ಮೃತ ವ್ಯಕ್ತಿಯ ಕುಟುಂಬ ಅಸಹಾಯಕರಾಗಿ ಕೋವಿಡ್ ವರದಿ ಬರೋದನ್ನೇ ಕಾದಿತ್ತು. ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದ ಬಳಿಕ ಮಂಗಳವಾರ ಸಂಜೆ 6 ಗಂಟೆಗೆ ಮೃತರಿಗೆ ಕೋವಿಡ್ ಪಾಸಿಟಿವ್ ಎಂದು ಹೇಳಲಾಗಿದೆ. ಆದರೆ, ವರದಿ ಬಂದ ಬಳಿಕ ಇನ್ನಷ್ಟು ಸಂಕಷ್ಟ ಮನೆಯವರಿಗೆ ಕಾದಿತ್ತು.

ಕೋವಿಡ್ ವರದಿ ಬಂದ ಬಳಿಕ ಅಂತ್ಯಸಂಸ್ಕಾರದ ಬಗ್ಗೆ ಸರಿಯಾದ ಮಾಹಿತಿ ದೊರಕದೇ ಮೃತವ್ಯಕ್ತಿಯ ಕುಟುಂಬಸ್ಥರು ರಾತ್ರಿಯವರೆಗೆ ಆಸ್ಪತ್ರೆಯ ಮುಂದೆ ಪರದಾಡಿದ್ದಾರೆ. ಕೊನೆಗೆ ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬಕ್ಕೆ ತಿಳಿಸಲಾಯಿತು. ಆ ನಡುವೆ ಶವಾಗಾರದ ವೆಚ್ಚ ಎಂದು 2,500 ರೂ. ಕುಟುಂಬಸ್ಥರಿಂದ ಪಡೆಯಲಾಗಿದೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಎ.ಜೆ.ಮೆಡಿಕಲ್ ಆಸ್ಪತ್ರೆಗೆ ಕುಟುಂಬಸ್ಥರು ಬಂದು ತಲುಪಿದರೂ ಅವರಿಗೆ ಯಾರೂ ಸರಿಯಾದ ಮಾಹಿತಿ ನೀಡಿಲ್ಲ. ಆಸ್ಪತ್ರೆಯವರು ಮೃತದೇಹದ ಪರೀಕ್ಷೆ, ಕೋವಿಡ್ ತಪಾಸಣೆ ಎಂದು ಮತ್ತೆ 8,500 ರೂ. ಬಿಲ್ ಪಾವತಿಸುವಂತೆ ತಿಳಿಸಿದ್ದಾರೆ. ಅಲ್ಲದೇ ಅಂತ್ಯಕ್ರಿಯೆಗೆ ಬೇಕಾದ ಕಿಟ್​ಗಳನ್ನು ಖರೀದಿಸುವಂತೆ ಸೂಚಿಸಿದ್ದಾರೆ. ತಾಲೂಕು ಆಡಳಿತದ ಪ್ರತಿನಿಧಿಗಳು ಬಂದು ಮೃತ ದೇಹವನ್ನು ಅಂತ್ಯಕ್ರಿಯೆಗೆ ಸಾಗಿಸಲಿದ್ದಾರೆ ಎಂದಷ್ಟೇ ಮಾಹಿತಿ ನೀಡಿದರು. ಕುಟುಂಬದ ಸಂಪರ್ಕಕ್ಕೆ ಜಿಲ್ಲಾಡಳಿತದ ಯಾವ ಪ್ರತಿನಿಧಿಗಳೂ ಲಭ್ಯರಿರಲಿಲ್ಲ.

ಈ ಕುರಿತು ನಮಗೆ ಮತ್ತೆ ಮಾಹಿತಿ ನೀಡಿದ ಮೃತರ ಕುಟುಂಬ ಸಹಾಯ ಮಾಡುವಂತೆ ಕೋರಿದೆ. ನಾವು ಸತತ ಆರು ಗಂಟೆಗಳ ಕಾಲ ಜಿಲ್ಲಾಡಳಿತದ ಬೆನ್ನು ಹತ್ತಿದೆವು. ಜಿಲ್ಲಾ ಆರೋಗ್ಯಾಧಿಕಾರಿಗೆ ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿ‌ ಮೃತರಾದ ಕೋವಿಡ್ ಸೋಂಕಿತರ ಮೃತದೇಹದ ವಿಲೇವಾರಿ ನಡೆಸುವುದು, ಅದರ ಖರ್ಚುವೆಚ್ಚ, ಕೋವಿಡ್ ಪರೀಕ್ಷೆ, ಮೃತದೇಹವನ್ನು ಪರೀಕ್ಷಿಸಿದ್ದಕ್ಕೆ ಬಿಲ್ ವಿಧಿಸಿರುವ ಕುರಿತು, ಅದನ್ನು ಯಾರು ಭರಿಸಬೇಕು ಎಂಬುದರ ಕುರಿತು ಸರಿಯಾದ ಸ್ಪಷ್ಟತೆ ಇರಲಿಲ್ಲ. ತಹಶೀಲ್ದಾರ್​ರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ. ತಹಶೀಲ್ದಾರ್ ಅಂತ್ಯಸಂಸ್ಕಾರದ ಖರ್ಚು ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಲಿದೆ ಎಂದಿದ್ದರು.‌ ಆದರೆ ಮಧ್ಯಾಹ್ನ ಕಳೆದರೂ ಅಂತ್ಯ ಸಂಸ್ಕಾರದ ಕುರಿತು ಮಾಹಿತಿ ನೀಡಲು ಯಾರೂ ಲಭ್ಯರಾಗದೇ ಮೃತರ ಕಡೆಯವರು ಆಸ್ಪತ್ರೆಯ ಶವಾಗಾರದ ಮುಂದೆ ಅಕ್ಷರಶಃ ಗತಿ ಇಲ್ಲದವರಂತೆ ನಿಂತು ಬಿಟ್ಟರು. ಮತ್ತೆ ನಾವು ಅಧಿಕಾರಿಗಳ ಬೆನ್ನು ಹತ್ತಿದ ಮೇಲೆ ಹೆಣ ಕೊಂಡೊಯ್ಯುವ ಆ್ಯಂಬುಲೆನ್ಸ್ ಚಾಲಕನ ನಂಬರ್ ಮಾತ್ರ ತಹಶೀಲ್ದಾರ್ ಕಡೆಯಿಂದ ದೊರಕಿತು. ಎಲ್ಲ ಒದ್ದಾಟದ ನಂತರ ಸಂಜೆ ಆರು ಗಂಟೆಗೆ ಅಂತ್ಯ ಸಂಸ್ಕಾರ ನಡೆಸುವುದಾಗಿ ತಿಳಿಸಲಾಯಿತು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಈ ನಡುವೆ ಇನ್ನೇನು ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಕೊಂಡಯ್ಯಲಾಗುತ್ತದೆ ಎನ್ನುವಾಗ ಮತ್ತೆ ಆಸ್ಪತ್ರೆಯವರು ಆ್ಯಂಬುಲೆನ್ಸ್ ಚಾಲಕ, ಸಿಬ್ಬಂದಿಗೆ, ಅಂತ್ಯ ಸಂಸ್ಕಾರ ನಡೆಸುವವರಿಗೆ ಒಟ್ಟು 6 ಪಿಪಿಇ ಕಿಟ್ ಖರೀದಿಸಬೇಕಿದೆ. ತಲಾ 1,500 ರೂ.ನಂತೆ, ಒಟ್ಟು 9 ಸಾವಿರ ರೂ. ಪಾವತಿಸಿ ಎಂದು ಹೇಳಿದ್ದಾರೆ.‌ ಈ ಕುರಿತು ನಾನು ತಹಶೀಲ್ದಾರರ ಗಮನ ಸೆಳೆದಾಗ ಮೆಡಿಕಲ್ ಕಾಲೇಜಿನವರೇ ಉಚಿತವಾಗಿ ಪಿಪಿಇ ಕಿಟ್ ಒದಗಿದಬೇಕು ಎಂದು ಹೇಳಿದ್ದಾರೆಯೇ ಹೊರತು ಸಮಸ್ಯೆ ಮಾತ್ರ ಬಗೆಹರಿಸಲಿಲ್ಲ. ಜಿಲ್ಲಾಡಳಿತದ ಉಚಿತ ಚಿಕಿತ್ಸೆಯ ಮಾತು ನಂಬಿ ರೋಗಿಯನ್ನು ಬದುಕಿಸಲು ಖಾಸಗಿ ಮೆಡಿಕಲ್ ಕಾಲೇಜಿಗೆ ಕರೆದೊಯ್ದ ತಪ್ಪಿಗೆ, ಯಾವ ಚಿಕಿತ್ಸೆಯೂ ಇಲ್ಲದೇ, ಬರೀ ಮೃತದೇಹಕ್ಕೆ ಸುಮಾರು 20 ಸಾವಿರ ರೂ.ಗೂ ಹೆಚ್ಚು ಹಣವನ್ನು ಕುಟುಂಬವೊಂದು ಕಳೆದುಕೊಂಡಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ABOUT THE AUTHOR

...view details