ಮಂಗಳೂರು:ರಾಜ್ಯದಲ್ಲಿ ಬಸ್ ಸಂಚಾರಕ್ಕೆ ಸರ್ಕಾರ ಇತ್ತೀಚೆಗೆ ಅವಕಾಶ ನೀಡಿದ್ದರೂ ದ.ಕ ಜಿಲ್ಲೆಯಲ್ಲಿ ಆರಂಭವಾಗದೆ ಇದ್ದ ಖಾಸಗಿ ಬಸ್ಗಳ ಓಡಾಟ ಜೂ. 1ರಿಂದ ಆರಂಭವಾಗಲಿದೆ.
ಸರ್ಕಾರ ಅವಕಾಶ ನೀಡಿದ್ದರೂ ಖಾಸಗಿ ಬಸ್ ಮಾಲೀಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಸ್ಗಳನ್ನು ಓಡಿಸದಿರಲು ನಿರ್ಧರಿಸಿದ್ದರು. ಈ ಹಿನ್ನೆಲೆ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್, ಖಾಸಗಿ ಬಸ್ ಮಾಲೀಕರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಜೂ. 1ರಿಂದ ಖಾಸಗಿ ಬಸ್ಗಳನ್ನು ಓಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆರಂಭಿಕ ಹಂತದಲ್ಲಿ ಕೆಲವೇ ಬಸ್ಗಳ ಓಡಾಟ ಆರಂಭಿಸಿ ಪ್ರಯಾಣಿಕರ ಬೇಡಿಕೆಯ ಮೇರೆಗೆ ಅವುಗಳ ಸಂಖ್ಯೆಯನ್ನು ಕ್ರಮೇಣ ಜಾಸ್ತಿ ಮಾಡಲು ಖಾಸಗಿ ಬಸ್ಗಳ ಮಾಲೀಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೂಚಿಸಿದ್ದಾರೆ. ಬಸ್ನಲ್ಲಿ ಸಂಚರಿಸುವ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್, ಕೈಗಳಿಗೆ ಸ್ಯಾನಿಟೈಜರ್ ಬಳಸುವುದು ಹಾಗೂ ತಮ್ಮದೇ ಆದ ಆಹಾರ, ನೀರು ಉಪಯೋಗಿಸುವುದು ಕಡ್ಡಾಯವಾಗಿದೆ ಎಂದಿದ್ದಾರೆ.
ಬಸ್ನಲ್ಲಿ ಶೇ. 50ರಷ್ಟು ಪ್ರಯಾಣಿಕರು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಜೊತೆಯಲ್ಲಿಟ್ಟುಕೊಂಡು ಪ್ರಯಾಣಿಸಲು ಸೂಚಿಸಲಾಗಿದೆ. ವಾಹನಗಳ ಮಾರ್ಗಸೂಚಿ ಪ್ರಕಾರ ಬಸ್ ಸ್ಯಾನಿಟೈಸ್ ಮಾಡಬೇಕು, ಚಾಲಕರು ಮತ್ತು ನಿರ್ವಾಹಕರು ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಹಾಗೂ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.