ಪುತ್ತೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಕರ್ನಾಟಕದ ಇಬ್ಬರು ಮಕ್ಕಳು ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರ ನೀಡುವ 2021ನೇ ಸಾಲಿನ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ’ ಪ್ರಶಸ್ತಿಗೆ ಒಟ್ಟು 32 ಮಕ್ಕಳು ಆಯ್ಕೆಯಾಗಿದ್ದಾರೆ.
ನವೋನ್ವೇಷಣೆ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಹಾಗೂ ದೆಹಲಿ ಆರ್ಮಿ ಪಬ್ಲಿಕ್ ಸ್ಕೂಲ್ನಲ್ಲಿ ಕಲಿಯುತ್ತಿರುವ ಬೆಂಗಳೂರಿನ ವೀರ್ ಕಶ್ಯಪ್ ಪ್ರಶಸ್ತಿಗೆ ಆಯ್ಕೆಯಾದ ಕನ್ನಡಿಗರು. ಇವರಿಬ್ಬರಿಗೂ ಆವಿಷ್ಕಾರ ವಲಯದಲ್ಲಿ ಪುರಸ್ಕಾರ ಲಭಿಸಿದೆ.
ಓದಿ:ರಾಜ್ಯದಲ್ಲಿ ಮುಂದಿನ ತಿಂಗಳಿಂದ 350 ಎಲೆಕ್ಟ್ರಿಕ್ ಬಸ್ಗಳ ಸಂಚಾರ: ಲಕ್ಷ್ಮಣ ಸವದಿ
ಸರ್ಕಾರ ಪ್ರತೀ ವರ್ಷ ಬಾಲ ಪ್ರತಿಭೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ಒಂದು ಪದಕ, 1 ಲಕ್ಷ ರೂ. ನಗದು ಒಳಗೊಂಡಿದೆ. ವಿಜೇತರೊಂದಿಗೆ ಪ್ರಧಾನಿ ಮೋದಿ ಇಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ವೀರ್ ಕಶ್ಯಪ್ ಅವರು ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಹಾವು-ಏಣಿ ಮಾದರಿಯ ‘ಕೊರೊನಾ ಯುಗ’ ಎಂಬ ವಿಶಿಷ್ಟ ಆಟ ಕಂಡುಹಿಡಿದಿದ್ದರು. ರಾಕೇಶ್ ಕೃಷ್ಣ ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುವ ಸಂಸ್ಥೆಯ ವಿದ್ಯಾರ್ಥಿ. ಸಂಘದ ಸಹಕಾರ, ಶಿಕ್ಷಕರ ಮಾರ್ಗದರ್ಶನ ಪೋಷಕರ ಪ್ರೋತ್ಸಾಹ ತನ್ನ ಈ ಸಾಧನೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದು ಪ್ರಶಸ್ತಿ ಪುರಸ್ಕೃತ ಪುತ್ತೂರಿನ ರಾಕೇಶ್ ಹೇಳಿಕೊಂಡಿದ್ದಾರೆ. ಆತ ಇಂದು ಮ.12.30 ಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಜತೆ ಸಂವಾದ ನಡೆಸಲಿದ್ದಾನೆ.