ಮಂಗಳೂರು (ದಕ್ಷಿಣ ಕನ್ನಡ) :ತೆಂಕುತಿಟ್ಟು ಯಕ್ಷಗಾನದ ದಂತಕತೆ, ಬಲಿಪ ಪರಂಪರೆಯ ಮೇರು ಶಿಖರವಾಗಿದ್ದ ದಿ.ಬಲಿಪ ನಾರಾಯಣ ಭಾಗವತರು ಇತ್ತೀಚೆಗೆ ಇಹಲೋಕ ತ್ಯಜಿಸಿದರು. ಇದೀಗ ಪ್ರಧಾನಿ ಮೋದಿಯವರು ಶ್ರದ್ಧಾಂಜಲಿ ಅರ್ಪಿಸಲು ಪತ್ರಯೊಂದನ್ನು ಬರೆದಿದ್ದು, ಈ ಪತ್ರವನ್ನು ದಿ. ಬಲಿಪ ಭಾಗವತರ ಪುತ್ರ ಬಲಿಪ ಶಿವಶಂಕರ ಭಾಗವತರಿಗೆ ಪ್ರಧಾನಿ ಮೋದಿ ಅವರು ಬರೆದಿದ್ದಾರೆ.
ಫೆ.21ರಂದು ಬರೆದಿರುವ ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. "ಶ್ರೀ ಬಲಿಪ ಭಾಗವತರ ನಿಧನವು ನನಗೆ ಅತೀವ ನೋವನ್ನು ಉಂಟು ಮಾಡಿದೆ. ಅವರ ಕುಟುಂಬದವರಿಗೆ ಅತೀವ ಸಂತಾಪ ಸೂಚಿಸುತ್ತಿದ್ದೇನೆ" ಎಂದು ಮೋದಿಯವರು ಪತ್ರದಲ್ಲಿ ಬರೆದಿದ್ದಾರೆ. "ಬಲಿಪ ಭಾಗವತರು ಅವರ ಇಡೀ ಜೀವನವನ್ನೇ ಯಕ್ಷಗಾನ ಕಲೆಗೆ ಮುಡಿಪಾಗಿಟ್ಟವರು. ಬಲಿಪ ಶೈಲಿಯ ಭಾಗವತಿಕೆಯಿಂದಲೇ ಅವರು ಜನಮನ್ನಣೆ ಪಡೆದು ಕಲಾ ರಸಿಕರ ಮೆಚ್ಚುಗೆಯನ್ನು ಗಳಿಸಿದ್ದರು. ಯಕ್ಷಗಾನ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ಮಹತ್ತರವಾದುದಾಗಿದೆ.
ಆದ್ದರಿಂದ ಕಲಾ ರಸಿಕರ ಅತೀವ ದುಃಖವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈಗ ಭಾಗವತರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಮೌಲ್ಯ, ಆದರ್ಶ ನಮಗೆ ದಾರಿದೀಪವಾಗಲಿದೆ. ಅವರ ಅಗಲುವಿಕೆಯಿಂದ ದುಃಖ ತಪ್ತರಾಗಿರುವ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಹಾಗೂ ಯಕ್ಷಗಾನ ಕಲಾ ರಸಿಕರಿಗೆ ದೇವರು ಶಕ್ತಿ ನೀಡಲಿ" ಎಂದು ಪ್ರಧಾನಿ ನರೇಂದ್ರ ಮೋದಿಯವರು ಪತ್ರದಲ್ಲಿ ಬರೆದಿದ್ದಾರೆ.
ಯಕ್ಷಗಾನದ ದಂತಕಥೆ :ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ, 'ಬಲಿಪ' ಪರಂಪರೆಯ ಸಮರ್ಥ ಕೊಂಡಿ ಬಲಿಪ ನಾರಾಯಣ ಭಾಗವತರು ಆರೋಗ್ಯ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಬಲಿಪ ಭಾಗವತರನ್ನು ಮೂಡುಬಿದಿರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಫೆ.16ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.