ಪುತ್ತೂರು: ನವರಾತ್ರಿ ಬಂತು ಎಂದರೆ ಸಾಕು ಎಲ್ಲ ದೇವಿ ದೇವಸ್ಥಾನಗಳಲ್ಲಿ ವಿಶೇಷ ದೇವಿ ಆರಾಧನೆಗಳು ನಡೆದರೆ, ಇನ್ನೊಂದೆಡೆ ವಿವಿಧ ವೇಷಧಾರಿಗಳು ಮನೆ ಮನೆಗೆ ಆಗಮಿಸುವ ಮೂಲಕ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಇಂಥಹುದೇ ಒಂದು ವೇಷದ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ ಹತ್ತು ವರ್ಷಗಳಿಂದ ಗಮನಸೆಳೆಯುತ್ತಿದ್ದಾರೆ. ವಿಶೇಷವಾದ ಪ್ರೇತದ ವೇಷ ಹಾಕುವ ಮೂಲಕ ತನ್ನ ಹರಕೆ ತೀರಿಸುತ್ತಿರುವ ಈ ವ್ಯಕ್ತಿ ಜನ ನೀಡಿದಷ್ಟು ಹಣವನ್ನು ಪಡೆದು ಮನೋರಂಜನೆಯನ್ನೂ ನೀಡುತ್ತಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗ ಪ್ರತೀ ದಸರಾ ಸಂದರ್ಭದ ವೇಷ ಹಾಕುತ್ತಾರೆ. ಪುತ್ತೂರಿನಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿರುವ ದಿವಾಕರ್ ನವರಾತ್ರಿ ಬಂತು ಎಂದರೆ ಪ್ರೇತವಾಗಿ ಬಿಡುತ್ತಾರೆ. ನವರಾತ್ರಿಯ ಕೊನೆಯ ಮೂರು ದಿನ ಮಾತ್ರ ಪ್ರೇತದ ವೇಷಧಾರಿಯಾಗುವ ದಿವಾಕರ್, ಪ್ರೇತದಂತೆ ಅರಚಾಡುತ್ತಾ ಮನೆ ಮನೆಗೆ, ಅಂಗಡಿ, ಅಂಗಡಿಗೆ ತೆರಳುತ್ತಾರೆ.
ನವರಾತ್ರಿಯಲ್ಲಿ ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ವೇಷಗಳು ಸಾಮಾನ್ಯವಾಗಿದ್ದರೆ, ಪುತ್ತೂರಿನಲ್ಲಿ ದಿವಾಕರ್ ಹಾಕುವ ಪ್ರೇತದ ವೇಷ ತುಂಬಾನೆ ವಿಶೇಷವಾದುದು. ಹಲವು ವರ್ಷಗಳಿಂದ ನವರಾತ್ರಿಯಲ್ಲಿ ವೇಷ ಹಾಕುವುದನ್ನು ಕರಗತ ಮಾಡಿಕೊಂಡಿರುವ ದಿವಾಕರ್ ಹಿಂದೆ ರಾಘವೇಂದ್ರ ಸ್ವಾಮಿ ವೇಷ, ಈಶ್ವರನ ವೇಷ, ಕೃಷ್ಣನ ವೇಷ ಹೀಗೆ ದೇವರ ವೇಷಗಳನ್ನು ಹಾಕುತ್ತಿದ್ದರು.
ಆದರೆ, ಧಾರ್ಮಿಕ ವೇಷಗಳನ್ನು ಹಾಕಲು ನಿಷೇಧ ಹೇರಿದ ಹಿನ್ನೆಲೆಯಲ್ಲಿ ವೇಷ ಹಾಕುವುದನ್ನೇ ಬಿಟ್ಟಿದ್ದ ದಿವಾಕರ್ ಅವರಿಗೆ ಕೈಕಾಲುಗಳು ಅಲುಗಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ನವರಾತ್ರಿಗೆ ಯಾವುದಾದರೂ ವೇಷ ಹಾಕಬೇಕು ಎಂದು ತೀರ್ಮಾನಿಸಿದ ಅವರು ಪ್ರೇತದ ವೇಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಪ್ರೇತದ ವೇಷ ಹಾಕಿಕೊಂಡು ಜನರನ್ನು ಮನರಂಜಿಸುತ್ತಿರುವ ದಿವಾಕರ್ಗೆ ಇದರಿಂದ ಹಣ ಮಾಡುವ ಉದ್ದೇಶವಿಲ್ಲ. ಹರಕೆಗಾಗಿ ಈ ವೇಷ ಹಾಕುತ್ತಿದ್ದು, ಜೀವನಕ್ಕಾಗಿ ಸ್ವಂತ ಆಟೋವನ್ನು ಅವಲಂಬಿಸಿದ್ದಾರೆ. ಪ್ರೇತದ ವೇಷಕ್ಕಾಗಿ ಪೊಲೀಸರ ಅನುಮತಿಯನ್ನೂ ಪಡೆದಿರುವ ಇವರು ಸಾಯಂಕಾಲ 6 ರ ಬಳಿಕ ತನ್ನ ವೇಷ ಕಳಚುತ್ತಾರೆ.
ಇದನ್ನೂ ಓದಿ:ಮಂಗಳೂರು ದಸರಾ ವೈಭವ: ಹುಲಿ ವೇಷ ಕುಣಿತವೇ ವಿಶೇಷ ಆಕರ್ಷಣೆ
ರಾತ್ರಿಯ ಸಮಯದಲ್ಲಿ ಈ ವೇಷವನ್ನು ಹಾಕಿಕೊಂಡು ತಿರುಗಿದಲ್ಲಿ ಜನ ಬೆಚ್ಚಿಬೀಳುವ ಸಾಧ್ಯತೆಯೂ ಇರುವ ಕಾರಣಕ್ಕಾಗಿ ಈ ರೀತಿಯ ವೇಳಾಪಟ್ಟಿಯನ್ನೂ ಅವರು ತಮ್ಮ ವೇಷದಲ್ಲಿ ಸೇರಿಸಿಕೊಂಡಿದ್ದಾರೆ. ಮೂರು ದಿನವೂ ಬಣ್ಣ ಬದಲಾಯಿಸುವ ಇವರು ಪುತ್ತೂರಿನ ಕಲಾವಿದರೊಬ್ಬರ ಬಳಿ ಪ್ರೇತದ ವೇಷ ಹಾಕಿಸಿಕೊಳ್ಳುತ್ತಾರೆ.