ಮಂಗಳೂರು:ಸದ್ಯ ಬಹರೈನ್ನಲ್ಲಿ ನೆಲೆಸಿರುವ ಮಂಗಳೂರಿನ ಯಕ್ಷಗಾನ ಕಲಾವಿದರೊಬ್ಬರು ಓಟಿಟಿಯಲ್ಲಿ ಯಕ್ಷಗಾನ ಪ್ರದರ್ಶನ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಯಕ್ಷಗಾನದಲ್ಲಿ ಒಬ್ಬರೆ ಒಂಬತ್ತು ಪಾತ್ರಗಳನ್ನು ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಮಂಗಳೂರಿನ ಯಕ್ಷಗಾನ ಕಲಾವಿದ ದೀಪಕ್ ರಾವ್ ಪೇಜಾವರ ಅವರು ಯಕ್ಷಗಾನ ರಂಗದಲ್ಲಿ ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಸದ್ಯ ಬಹರೈನ್ನಲ್ಲಿ ಕಾಲೇಜು ಉಪನ್ಯಾಸಕರಾಗಿರುವ ದೀಪಕ್ ರಾವ್ ಪೇಜಾವರ ಅವರು ಕರಾವಳಿಯ ಪ್ರಮುಖ ಕಲೆ ಎಂದು ಪ್ರಸಿದ್ದವಾದ ಯಕ್ಷಗಾನವನ್ನು ಓಟಿಟಿ ಪ್ಲಾಟ್ ಫಾರಂನಲ್ಲಿ ನೀಡಿ, ಜಗತ್ತಿನ ಎಲ್ಲರಿಗೂ ತಲುಪಿಸುವ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.
ಹೊಸ ದಾಖಲೆ:
ಹರಿದರುಶನ ಎಂಬ ಏಕವ್ಯಕ್ತಿ ಯಕ್ಷಗಾನವನ್ನು ಓಟಿಟಿ ಮೂಲಕ ಬಿಡುಗಡೆ ಮಾಡಲು ಚಿಂತಿಸಿದ್ದು, ಇದರ ಶೂಟಿಂಗ್ ಕಾರ್ಯ ಈಗಾಗಲೇ ಮುಗಿದಿದೆ. ಎರಡೂವರೆ ಗಂಟೆಯ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಈ ಯಕ್ಷಗಾನ ಪ್ರಸಂಗದಲ್ಲಿ 9 ಪಾತ್ರಗಳಿದ್ದು, ಈ ಎಲ್ಲ ಪಾತ್ರಗಳನ್ನು ಇವರೊಬ್ಬರೆ ನಿರ್ವಹಿಸುವುದು ವಿಶೇಷವಾಗಿದೆ. ಅಲ್ಲದೇ ಇದೊಂದು ಹೊಸ ದಾಖಲೆ ಸೃಷ್ಟಿಸಲಿದೆ. ವೇದಿಕೆಯಲ್ಲಿ ಇಂತಹ ಪಾತ್ರಗಳನ್ನು ಏಕಕಾಲದಲ್ಲಿ ಮಾಡಲು ಅಸಾಧ್ಯ. ಇದಕ್ಕಾಗಿ ಸಿನಿಮಾ ತಂತ್ರಜ್ಞಾನ ಬಳಸಿಕೊಂಡು ದೀಪಕ್ ರಾವ್, ಈ 9 ಪಾತ್ರಗಳನ್ನು ನಿರ್ವಹಿಸಿ ಓಟಿಟಿಯಲ್ಲಿ ಬಿಡುಗಡೆಗೊಳಿಸಲಿದ್ದಾರೆ.