ಬಂಟ್ವಾಳ(ದ.ಕ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸಂಭ್ರಮದ ಕಾರ್ಯಕ್ರಮವಿರಲಿ, ಅಲ್ಲೆಲ್ಲಾ ಕಲ್ಲಡ್ಕದ ಗೊಂಬೆಗಳದ್ದೇ ಕಾರುಬಾರು. ಅವುಗಳಿದ್ದರೇನೇ ಆ ಸಂಭ್ರಮಕ್ಕೊಂದು ಮೆರುಗು. ವಿವಿಧ ವೇಷಗಳನ್ನು ಹಾಕಿಕೊಂಡು ಈ ಗೊಂಬೆಗಳು ನರ್ತಿಸುತ್ತಿದ್ದರಂತೂ ಅಬ್ಬಾ..! ನೋಡಲೆರಡು ಕಣ್ಣು ಸಾಲದು. ಈ ಬಾರಿ ನಮ್ಮ ಕಲ್ಲಡ್ಕ ಗೊಂಬೆಗಳು ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದೆ. ಅದ್ಯಾವ ಕಾರ್ಯಕ್ರಮ ಅಂತೀರಾ? ಇಲ್ಲಿದೆ ನೋಡಿ.
ಕಳೆದ 37 ವರ್ಷಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ಗೊಂಬೆಗಳನ್ನು ಪರಿಚಯಿಸಿದ ಕೀರ್ತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮೇಶ್ ಕಲ್ಲಡ್ಕ ಅವರಿಗೆ ಸಲ್ಲುತ್ತದೆ. ಶಿಲ್ಪಾ ಗೊಂಬೆ ಬಳಗ ಎಂದೇ ಖ್ಯಾತಿ ಪಡೆದ ಈ ತಂಡವು ಡಿ.21 ರಿಂದ 27ರವರೆಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಭಾಗವಹಿಸಲಿದೆ. 50 ಬೃಹತ್ ತಟ್ಟಿರಾಯ(ಬೇತಾಳ)ಗಳು ಸೇರಿದಂತೆ 150 ಕ್ಕೂ ಅಧಿಕ ಕಲ್ಲಡ್ಕ ಶಿಲ್ಪಾ ಗೊಂಬೆಗಳು ಜಾಂಬೂರಿಯಲ್ಲಿ ಕುಣಿಯಲಿವೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ಈ ಜಾಂಬೂರಿಯು ಡಾ. ಎಂ ಮೋಹನ್ ಆಳ್ವ ಅವರ ಪರಿಕಲ್ಪನೆಯಂತೆ ಮೂಡಿಬರಲಿದೆ. ಇದಕ್ಕಾಗಿಯೇ ರಮೇಶ್ ಕಲ್ಲಡ್ಕ ಅವರು ವಿವಿಧ ಗೊಂಬೆಗಳ ಅಂತಿಮ ಹಂತದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾರು 10 ರಿಂದ 13 ಅಡಿಯ ತಟ್ಟಿರಾಯನ ಗೊಂಬೆಗಳು, ಕೀಲುಕುದುರೆಗಳು, ಸಣ್ಣ ಗೊಂಬೆಗಳು, ಕರಗ, ಜೋಕರ್, ಕಾರ್ಟೂನ್ ಗೊಂಬೆಗಳು ಸೇರಿದಂತೆ ಹಲವು ಕಲಾಕೃತಿಗಳು ಕಲ್ಲಡ್ಕದಲ್ಲಿ ಸಿದ್ಧಗೊಳ್ಳುತ್ತಿವೆ.