ಮಂಗಳೂರು:ನಗರದ ಪಕ್ಷಿಕೆರೆಯಲ್ಲಿರುವ ಪೇಪರ್ ಸೀಡ್ ಸಂಸ್ಥೆ ಪರಿಸರಕ್ಕೆ ಪೂರಕವಾದ ಸಾಮಗ್ರಿಗಳನ್ನು ತಯಾರಿಸುವುದರಲ್ಲಿ ಪ್ರಖ್ಯಾತಿ ಪಡೆದಿದೆ. ಹಬ್ಬಗಳು ಮತ್ತು ಇತರ ಆಚರಣೆಗಳ ವೇಳೆ ಪರಿಸರ ಪೂರಕ ಮತ್ತು ಬಳಕೆಯ ಬಳಿಕ ಗಿಡವಾಗಿ ಬೆಳೆಯುವ ಸಾಮಗ್ರಿಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನಕ್ಕೆ ಪರಿಸರ ಪ್ರೇಮಿ ಉತ್ಪನ್ನಗಳನ್ನು ತಯಾರಿಸಿದೆ.
ಖ್ಯಾತ ಪರಿಸರ ಪ್ರೇಮಿ, ಕಲಾವಿದ ನಿತಿನ್‌ವಾಸ್ ಅವರು ಪರಿಸರಕ್ಕೆ ಪೂರಕವಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತಾರೆ. ಇತ್ತೀಚಿಗೆ ಅವರ ಪೇಪರ್ ಸೀಡ್ ಸಂಸ್ಥೆಯಿಂದ ತಯಾರಿಸಲಾದ ಗಿಡವಾಗಿ ಬೆಳೆಯುವ ಮಾಸ್ಕ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯಾಗಿತ್ತು. ಇದೀಗ ಇವರು ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನ ದಿನಕ್ಕಾಗಿ ವಿಶೇಷ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಕರಾವಳಿಯ ಪ್ರಸಿದ್ದ ಬೆಳೆಯಾದ ಅಡಿಕೆ ಮರದ ಎಲೆಯನ್ನು ಉಪಯೋಗಿಸಿ ಭಾರತದ ತ್ರಿವರ್ಣ ಧ್ವಜದ ಬ್ಯಾಡ್ಜ್ ಮತ್ತು ರಕ್ಷಾ ಬಂಧನ ತಯಾರಿಸಿದ್ದಾರೆ. ಈ ಹಿಂದೆ ಇದನ್ನು ಪೇಪರ್‌ಗಳನ್ನು ಸಂಸ್ಕರಿಸಿ ತಯಾರಿಸುತ್ತಿದ್ದರು. ಆದರೆ ರಕ್ಷಾ ಬಂಧನ ಮತ್ತು ಸ್ವಾತಂತ್ರ್ಯ ದಿನಾಚರಣೆ ಮಳೆಗಾಲದಲ್ಲಿ ಬರುವುದರಿಂದ ಅದು ಬೇಗನೆ ಒದ್ದೆಯಾಗುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅಡಿಕೆ ಮರದ ಹಾಳೆಯ ಮೂಲಕ ತಯಾರಿಸಿದ್ದಾರೆ.