ಕರ್ನಾಟಕ

karnataka

ETV Bharat / state

ಕೇರಳ ಟು ಕರ್ನಾಟಕ: 142 ಕಿ.ಮೀ ನಡೆದು ಬಂದ ತುಂಬು ಗರ್ಭಿಣಿ - ಕೊರೊನಾ ಸೋಂಕಿನ ಲಾಕ್​ಡೌನ್​

ತುತ್ತು ಚೀಲಕ್ಕೆ ಉದ್ಯೋಗ ಅರಸಿ ಕೇರಳಕ್ಕೆ ಹೋಗಿದ್ದ ಕಾರ್ಮಿಕರು ನಡೆದು ಕರ್ನಾಟಕ ತಲುಪಿದ್ದಾರೆ. ದುರಂತವೆಂದರೆ ತುಂಬು ಗರ್ಭಿಣಿಯೊಬ್ಬರು ಇವರೊಟ್ಟಿಗೆ ಅಲ್ಲಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಅವರು ನಡೆದದ್ದು ಬರೋಬ್ಬರಿ 142 ಕಿ.ಮೀ.

Pregnant walking 142 kilometers from kerala
142 ಕಿ.ಮೀ ನಡೆದು ಬಂದ ತುಂಬು ಗರ್ಭಿಣಿ

By

Published : Apr 8, 2020, 11:09 PM IST

Updated : Apr 9, 2020, 12:06 AM IST

ಮಂಗಳೂರು: ಗರ್ಭಿಣಿಯೊಬ್ಬರು ತಮ್ಮ ಏಳು ಮಂದಿ ಸಂಗಡಿಗರೊಂದಿಗೆ ಬರೋಬ್ಬರಿ 142 ಕಿ.ಮೀ. ನಡಿಗೆ ಮೂಲಕ ಕೇರಳದ ಕಣ್ಣೂರಿನಿಂದ ಮಂಗಳೂರು ಸೇರಿರುವ ಕರಳು ಕಿವಚುವಂತಹ ಘಟನೆ ವರದಿಯಾಗಿದೆ.

142 ಕಿ.ಮೀ ನಡೆದು ಬಂದ ತುಂಬು ಗರ್ಭಿಣಿ

ಇತ್ತೀಚೆಗಷ್ಟೇ ಬಳ್ಳಾರಿ ಮಹಿಳೆ ನಡೆದು ನಡೆದು ಸುಸ್ತಾಗಿ ಅಸುನೀಗಿದ ಘಟನೆ ಮರೆಮಾಚುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಕಾರ್ಮಿಕರ ಇಂತಹ ದಯನೀಯ ಪರಿಸ್ಥಿತಿ ಬಗ್ಗೆ ಈಗಲಾದರೂ ಕಣ್ಣು ತೆರೆಯುವುದೇ ಎಂಬ ಆಶಾಭಾವನೆ ಇಂತಹ ನೂರಾರು ಕಾರ್ಯಕರ್ತರದ್ದಾಗಿದೆ.

ಏನಿದು ಘಟನೆ?

ಕಟ್ಟಡ ಕೆಲಸದ ನಿಮಿತ್ತ ಕಣ್ಣೂರಿನಲ್ಲಿ ವಿಜಯಪುರದ ಎಂಟು ಕಾರ್ಮಿಕರು ಕೆಲಸಕ್ಕೆ ಸೇರಿದ್ದರು. ಕೊರೊನಾ ಸೋಂಕಿನಿಂದ ಲಾಕ್​ಡೌನ್ ಘೋಷಣೆಯಾದ ಹಿನ್ನೆಲೆ ಅಲ್ಲಿನ ಗುತ್ತಿಗೆದಾರ ಕಾರ್ಮಿಕರನ್ನು ಊರಿಗೆ ಹೋಗುವಂತೆ ತಿಳಿಸಿದ್ದಾನೆ. ಆದರೆ, ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಕಳೆದ ನಾಲ್ಕು ದಿನಗಳಿಂದ ನಡೆದುಕೊಂಡು ಊರು ಸೇರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಲ್ಲಿ ತುಂಬು ಗರ್ಭಿಣಿಯೂ ಸೇರಿದ್ದರು.

ಗರ್ಭಿಣಿಯ ನೆರವಿಗೆ ಯಾವ ಸರ್ಕಾರಿ ಇಲಾಖೆ, ಸಂಘ, ಸಂಸ್ಥೆಗಳಾಲಿ ಬಾರದಿರುವುದು ಶೋಚನೀಯವಾಗಿತ್ತು. ಆದರೆ, ದಾರಿ ಮಧ್ಯೆ ಕೆಲವರು ಊಟ ನೀಡಿದ್ದಾರೆ. ಇನ್ನೂ ಕೆಲವೆಡೆ ಆಹಾರವೇ ಸಿಕ್ಕಿಲ್ಲ, ಪರಿಣಾಮ ಹಸಿವಿನಿಂದಲೇ ಸುಮಾರು 142 ಕಿ.ಮೀ. ಕಾಲ್ನಡಿಗೆಯ ಮೂಲಕವೇ ಕ್ರಮಿಸಬೇಕಾಯಿತು.

ಇದೀಗ ಕರ್ನಾಟಕ ತಲುಪಿದ್ದು, ಕಾರ್ಮಿಕರ ಸುರಕ್ಷತೆಯನ್ನೂ ಗಮನಿಸದೇ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಾಹನದ ವ್ಯವಸ್ಥೆಯನ್ನೂ ಮಾಡದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚೆಕ್​ಪೋಸ್ಟ್​ನಲ್ಲಿ ನಡೆಯದ ತಪಾಸಣೆ

ಆದರೆ, ತೊಕ್ಕೊಟ್ಟು ಟೋಲ್ ಗೇಟ್ ಬಳಿ ಪೊಲೀಸರು, ಚೆಕ್ ಪೋಸ್ಟ್, ವೈದ್ಯರ ತಂಡಗಳಿದ್ದರೂ ಈ 8 ಕಾರ್ಮಿಕರ ತಂಡವನ್ನು ತಪಾಸಣೆ ನಡೆಸದೇ ಬಿಟ್ಟಿರುವುದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಕೇರಳದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಈ ಕೂಡಲೇ ಜಿಲ್ಲಾಡಳಿತ ಎಂಟು ಕಾರ್ಮಿಕರ ಆರೋಗ್ಯ ಪರೀಕ್ಷೆಗೆ ಮುಂದಾಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ‌.

Last Updated : Apr 9, 2020, 12:06 AM IST

ABOUT THE AUTHOR

...view details