ಸುಳ್ಯ: ಕೇರಳದ ವಿವಿಧ ಜಿಲ್ಲೆಗಳಲ್ಲಿ ಬಾತುಕೋಳಿ, ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ತಾಲೂಕಿನ ಜಾಲ್ಸೂರಿನ ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.
ಈ ಬಗ್ಗೆ ಸುಳ್ಯ ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಈಟಿವಿ ಭಾರತ್ ಜೊತೆ ಫೋನ್ ಮೂಲಕ ಮಾತನಾಡಿದ್ದು, ಹಕ್ಕಿ ಜ್ವರದ ಬಗ್ಗೆ ಜನರು ಬಹಳಷ್ಟು ಭೀತಿಗೆ ಒಳಗಾಗಿದ್ದು, ಯಾವುದೇ ರೀತಿಯಲ್ಲೂ ಭೀತಿಗೊಳಪಡುವ ಅವಶ್ಯಕತೆ ಇರುವುದಿಲ್ಲ ಎಂದಿದ್ದಾರೆ. ಈ ಬಾರಿ ಕಾಣಿಸಿಕೊಂಡ ವೈರಾಣು ಪ್ರಭೇದ ಎಚ್5ಎನ್8 ಮಾದರಿಯ ಪ್ರಭೇದದ್ದಾಗಿದ್ದು, ಈ ಹಿಂದೆ ಕಾಣಿಸಿಕೊಂಡ ಎಚ್5ಎನ್1 ಪ್ರಭೇದದಷ್ಟು ಸಾಂಕ್ರಾಮಿಕವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮನುಷ್ಯರ ಮೇಲೆ ಇದರ ಪರಿಣಾಮ ವಿಪರೀತವಾಗಿ ಇರುವುದಿಲ್ಲ. ಸಾಮಾನ್ಯವಾಗಿ ಕೇರಳದಲ್ಲಿ ಪ್ರತಿ ವರ್ಷ ವಲಸೆ ಹಕ್ಕಿಗಳ ಆಗಮನವಾಗುವ ಸಮಯದಲ್ಲಿ ಇದು ಕಂಡು ಬರುತ್ತದೆ. ಇದರ ನಿಯಂತ್ರಣಕ್ಕೆ ಬೇಕಾದ ಎಲ್ಲ ಮುನ್ನೆಚ್ಚರಿಕೆ ಕೇರಳ ಸರ್ಕಾರ ತೆಗೆದುಕೊಳ್ಳುತ್ತಿದೆ. ಈ ತನಕ ದೇಶದಲ್ಲಿ ಹಕ್ಕಿ ಜ್ವರದಿಂದಾಗಿ ಮನುಷ್ಯನ ಸಾವಿನ ಪ್ರಕರಣ ದಾಖಲಾಗಿಲ್ಲ. ಹಾಗೆಂದು ಈ ರೋಗವನ್ನು ತೀವ್ರ ನಿರ್ಲಕ್ಷ್ಯ ಮಾಡಬಾರದು. ಒಂದು ವೇಳೆ ಈ ರೋಗ ನಮ್ಮಲ್ಲಿ ಕಾಣಿಸಿಕೊಂಡರೆ, ಸಾಕು ಕೋಳಿ, ಸಾಕು ಹಕ್ಕಿಗಳನ್ನು ನಿರ್ಮೂಲನ ಮಾಡಬೇಕಾಗುತ್ತದೆ. ಜನರು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯ ಇಲ್ಲ ಎಂದಿದ್ದಾರೆ.
ತಾಲೂಕಿನ ಪಶುಪಾಲನಾ ಇಲಾಖೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸನ್ನದ್ಧವಾಗಿದ್ದು, ಜಾಲ್ಸೂರು ಗಡಿ ಚೆಕ್ ಪೋಸ್ಟ್ ನಲ್ಲಿ 24/7 ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಇಲಾಖೆ ತನ್ನಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸರದಿಯಂತೆ ಕರ್ತವ್ಯ ನಿರ್ವಹಿಸಲು ಸೂಚಿಸಿದೆ. ಕೇರಳದಿಂದ ತಾಲೂಕಿಗೆ ಒಳಬರುತ್ತಿರುವ ಕೋಳಿ ಮಾಂಸ ಮತ್ತು ಇತರ ಕೋಳಿ ಉತ್ಪನ್ನಗಳನ್ನು ಚೆಕ್ ಪೋಸ್ಟ್ ನಲ್ಲೇ ತಡೆಯಲಾಗುತ್ತಿದೆ. ತಾಲೂಕಿನಿಂದ ಕೇರಳಕ್ಕೆ ಹೋಗುವ ಕೋಳಿ ಸಾಗಾಟ ವಾಹನ ಮತ್ತು ಆಹಾರ ಸರಬರಾಜು ಮಾಡಿ ವಾಪಸ್ ಮರಳುವ ವಾಹನಗಳನ್ನು ಅನುನಾಶಕ, ಕ್ರಿಮಿನಾಶಕ ಔಷಧಗಳು ಸಿಂಪಡಿಸಿ ಶುಚೀಕರಣ ಮಾಡಲಾಗುತ್ತಿದೆ. ಸುಳ್ಯದಲ್ಲಿನ ಕೋಳಿ ಉದ್ಯಮಗಳ ಮೇಲೂ ನಿಗಾ ಇಡಲಾಗಿದೆ. ಕೋಳಿ ಫಾರ್ಮ್ ಗಳಲ್ಲಿ ಅಧಿಕಾರಿಗಳು ಪರಿವೀಕ್ಷಣಾ ಕಾರ್ಯ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಓದಿ:ಅಕಾಲಿಕ ಮಳೆಗೆ ಭತ್ತ, ರಾಗಿ, ಕಾಫಿ ಬೆಳೆ ನಾಶ... ಸರ್ಕಾರಕ್ಕೆ ರೈತರ ಮನವಿ
ಹಕ್ಕಿ ಜ್ವರದ ಬಗ್ಗೆ ಜನರು ಅನಗತ್ಯವಾಗಿ ಭೀತಿ ಪಡದೇ ಯಾವುದೇ ಹಕ್ಕಿಗಳ ಸಂಶಯಾಸ್ಪದ ಸಾವು ಅಥವಾ ಕೋಳಿಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಡಾ. ನಿತಿನ್ ಪ್ರಭು ಮುಖ್ಯ ಪಶುವೈದ್ಯಾಧಿಕಾರಿ ಸುಳ್ಯ (9844995078), ಡಾ.ಸೂರ್ಯನಾರಾಯಣ ಪಶುವೈದ್ಯಾಧಿಕಾರಿ ಬೆಳ್ಳಾರೆ (9448177566) ಡಾ.ವೆಂಕಟಾಚಲಪತಿ ಪಶುವೈದ್ಯಾಧಿಕಾರಿ ಗುತ್ತಿಗಾರು (9449778338) ಅಥವಾ ಡಾ. ಮೇಘಶ್ರೀ ಪಶುವೈದ್ಯಾಧಿಕಾರಿ ಕಳಂಜ (+918618150305) ಇವರನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಿದರು.