ಕರ್ನಾಟಕ

karnataka

ETV Bharat / state

ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ₹10 ಲಕ್ಷ ಬಹುಮಾನ!

ಕಳೆದ ವರ್ಷ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳ ಸುಳಿವು ಕೊಟ್ಟವರಿಗೆ ಎನ್‌ಐಎ ನಗದು ಬಹುಮಾನ ಘೋಷಿಸಿದೆ.

Praveen Nettaru murder case
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

By

Published : Jan 20, 2023, 11:22 AM IST

Updated : Jan 20, 2023, 12:39 PM IST

ಸುಳ್ಯ (ದಕ್ಷಿಣ ಕನ್ನಡ) :ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯನ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸುತ್ತಿದೆ. ಇದೀಗ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಕಳೆದ ವರ್ಷದ ಜುಲೈ 26ರಂದು ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ತಮ್ಮ ಕೋಳಿ ಅಂಗಡಿಯ ಮುಂದೆಯೇ ದುಷ್ಕರ್ಮಿಗಳು ಪ್ರವೀಣ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣ ಸಂಬಂಧ ನಿಷೇಧಿತ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರಾಗಿರುವ ಬಂಟ್ವಾಳ ತಾಲ್ಲೂಕಿನ ಕೊಡಾಜೆಯ ಅದ್ದ ಎಂಬವರ ಮಗ, ಮೊಹಮ್ಮದ್‌ ಶರೀಫ್‌ (53) ಮತ್ತು ನೆಕ್ಕಿಲಾಡಿಯ ಅಗ್ನಾಡಿ ಅಬೂಬಕರ್ ಎಂಬವರ ಮಗ ಕೆ.ಎ ಮಸೂದ್‌ (40) ಎಂಬವರ ಸುಳಿವು ನೀಡಿದರೆ ತಲಾ 5 ಲಕ್ಷ ರೂ. ಬಹುಮಾನದಂತೆ ಒಟ್ಟು 10 ಲಕ್ಷ ರೂ ನೀಡುವುದಾಗಿ ಎನ್‌ಐಎ ಪ್ರಕಟಣೆ ಹೊರಡಿಸಿದೆ. ಮಾಹಿತಿದಾರರು ಮಾಹಿತಿಯನ್ನು info.blr.nia@gov.in ಅಥವಾ ದೂರವಾಣಿ ಸಂಖ್ಯೆ 080-29510900/8904241100 ಅಥವಾ ಪೊಲೀಸ್​ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್​ಐಎ), 8ನೇ ಮಹಡಿ, ಸರ್​.ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು 560071 ಈ ವಿಳಾಸಕ್ಕೆ ನೀಡಬಹುದು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಎನ್‌ಐಎ ತಿಳಿಸಿದೆ.

ಈ ಪ್ರಕರಣದಲ್ಲಿ 2022ರ ನವೆಂಬರ್​ 5ರಂದು ಎನ್​ಐಎ ಮೂವರನ್ನು ಬಂಧಿಸಿತ್ತು. ಶಾಫಿ ಬೆಳ್ಳಾರೆ, ಇಕ್ಬಾಲ್​ ಬೆಳ್ಳಾರೆ ಹಾಗೂ ಸುಳ್ಯದ ಇಬ್ರಾಹಿಂ ಶಾ ಎಂಬವರನ್ನು ಆರೋಪಿಗಳ ಬೆಳ್ಳಾರೆಯ ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿತ್ತು. ಈ ಪೈಕಿ ಇಕ್ಬಾಲ್​ ಬೆಳ್ಳಾರೆ ಎಂಬಾತ ಬೆಳ್ಳಾರೆ ಗ್ರಾಮಸ್ಥನಾಗಿದ್ದು, ಶಾಫಿ ಬೆಳ್ಳಾರೆ ಎಸ್​ಡಿಪಿಐ ರಾಜ್ಯ ಕಾರ್ಯದರ್ಶಿ. ಇದೇ ಸಂದರ್ಭದಲ್ಲಿ ಸುಳ್ಯ, ಉಪ್ಪಿನಂಗಡಿ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಇನ್ನೂ ಹಲವೆಡೆಗಳಲ್ಲಿ ಎನ್​ಐಎ ಶೋಧ ನಡೆಸಿತ್ತು.

ಇವರ ಬಂಧನಕ್ಕೂ ಮುನ್ನ ಹತ್ಯೆಯ ಬಳಿಕ ನಾಪತ್ತೆಯಾದ ನಾಲ್ವರು ಆರೋಪಿಗಳ ಬಂಧನಕ್ಕೆ ಸಹಕರಿಸಿದವರ ಕುರಿತು ಮಾಹಿತಿ ನೀಡುವವರಿಗೆ ಎನ್​ಐಎ ಬಹುಮಾನ ಘೋಷಿಸಿತ್ತು. ಬೆಳ್ಳಾರೆಯ ಎಸ್.ಮಹಮ್ಮದ್ ಮುಸ್ತಫಾ, ಕೊಡಗು ಜಿಲ್ಲೆಯ ಮಡಿಕೇರಿಯ ಎಂ.ಎಚ್.ತುಫೈಲ್, ಕಲ್ಲುಮುಟ್ಲುಮನೆಯ ಎಂ.ಆರ್.ಉಮ್ಮರ್ ಫಾರೂಕ್ ಮತ್ತು ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್ ಎಂಬ ನಾಲ್ವರು ಶಂಕಿತರ ಸುಳಿವು ನೀಡಿದವರಿಗೆ 2022ರ ನವೆಂಬರ್‌ನಲ್ಲಿ ಒಟ್ಟು 14 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು.

ಇದನ್ನೂ ಓದಿ:WANTED! ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಪತ್ತೆಗೆ ನಗದು ಬಹುಮಾನ ಘೋಷಿಸಿದ NIA

Last Updated : Jan 20, 2023, 12:39 PM IST

ABOUT THE AUTHOR

...view details