ಸುಳ್ಯ(ದಕ್ಷಿಣಕನ್ನಡ): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಹಾಗೂ ಅದರ ಸಹ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿ ಅದೇಶಿಸಿದೆ. ಈ ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಸುಳ್ಯದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವೂ ಪ್ರಸ್ತಾಪವಾಗಿದೆ.
ಪಿಎಫ್‌ಐ ನಿಷೇಧಕ್ಕೆ ಕಾರಣ ನೀಡಿ ಕೇಂದ್ರ ಸರ್ಕಾರವು ಹೊರಡಿಸಿರುವ ತನ್ನ ಅಧಿಸೂಚನೆಯಲ್ಲಿ ನೀಡಿರುವ ವಿವರಣೆಯಲ್ಲಿ ಕರ್ನಾಟಕದಲ್ಲಿ ನಡೆದ ಹಲವು ಹತ್ಯೆಗಳು ಮತ್ತು ಕರ್ನಾಟಕ ಸರ್ಕಾರದ ಪಿಎಫ್ಐ ನಿಷೇಧ ಶಿಫಾರಸನ್ನೂ ಉಲ್ಲೇಖಿಸಿದೆ. ಕೇಂದ್ರ ಸರ್ಕಾರವು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಕೆಳಗಿನ ಕೆಲವು ಮುಖ್ಯಾಂಶಗಳು ಒಳಗೊಂಡಿವೆ.
1) ಸೊಸೈಟಿ ರಿಜಿಸ್ಟ್ರೇಶನ್ ಆ್ಯಕ್ಟ್ 1860ರ ಅಡಿ ನೋಂದಾಯಿಸಿಕೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಹಲವು ಅಧೀನ, ಸಹವರ್ತಿ ಸಂಘಟನೆಗಳನ್ನು ಹೊಂದಿದೆ. ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯ, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್, ನ್ಯಾಷನಲ್ ಕಾನ್ಫಡರೇಷನ್ ಆಫ್ ಹೂಮನ್ ರೈಟ್ಸ್ , ನ್ಯಾಷನಲ್ ವುಮೆನ್ಸ್ ಫ್ರಂಟ್, ಜ್ಯೂನಿಯರ್ ಫ್ರೆಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಇತ್ಯಾದಿ ಸಂಘಟನೆಗಳು ಪಿಎಫ್‌ಐ ಅಧೀನದಲ್ಲಿವೆ.
2) ಯುವಜನರು, ಮಹಿಳೆಯರು, ವಿದ್ಯಾರ್ಥಿಗಳು, ಇಮಾಮ್ಗಳು, ವಕೀಲರು ಮತ್ತು ಸಮಾಜದ ಕೆಳವರ್ಗದ ಜನರನ್ನು ತಲುಪಲಿ ಎಂದು ಪಿಎಫ್‌ಐ ಈ ಸಹವರ್ತಿಗಳನ್ನು ಹುಟ್ಟುಹಾಕಿದೆ. ಈ ಎಲ್ಲ ಸಂಘಟನೆಗಳೊಂದಿಗೆ ಪಿಎಫ್‌ಐ ನೇರ ಸಂಬಂಧ ಹೊಂದಿದೆ.
3) ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳು ಸಮಾಜದ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸಂಘಟನೆಗಳಾಗಿ ತಮ್ಮನ್ನು ಗುರುತಿಸಿಕೊಂಡಿವೆ. ಆದರೆ ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಆತಂಕ ಉಂಟುಮಾಡುವಂತೆ ನಡೆದುಕೊಳ್ಳುತ್ತಿವೆ. ಸಾಂವಿಧಾನಿಕ ಅಧಿಕಾರ ಮತ್ತು ಸಾಂವಿಧಾನಿಕ ವ್ಯವಸ್ಥೆಗೆ ಅಗೌರವ ತೋರುತ್ತಿದೆ.
4) ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಇದರಿಂದ ಸಮಾಜದಲ್ಲಿ ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ಒದಗುವ ಅಪಾಯವಿದೆ. ಉಗ್ರವಾದಕ್ಕೆ ಬೆಂಬಲ ನೀಡಲಾಗುತ್ತಿದೆ.
5) ಪಿಎಫ್‌ಐನ ಸಂಸ್ಥಾಪಕ ಸದಸ್ಯರ ಪೈಕಿ ಹಲವರು ಸ್ಟುಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾದ ( ಸಿಮಿ ) ನಾಯಕರಾಗಿದ್ದವರು. ಪಿಎಫ್ಐ ಜಮಾತ್ - ಉಲ್ - ಮುಜಾಹಿದ್ದೀನ್ ಬಾಂಗ್ಲಾದೇಶದೊಂದಿಗೆ ನಂಟು ಇದೆ. ಈ ಎರಡೂ ಸಂಘಟನೆಗಳನ್ನು ಈಗಾಗಲೇ ನಿಷೇಧಿಸಲಾಗಿದೆ.
6) ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಸಿಸ್) ಹಾಗೂ ಇತರ ಜಾಗತಿಕ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಪಿಎಫ್‌ಐಗೆ ಸಂಬಂಧ ಇರುವ ಹಲವು ಪುರಾವೆಗಳು ಲಭ್ಯವಾಗಿವೆ.
7) ಭಾರತದಲ್ಲಿ ಅಭದ್ರತೆಯಿದೆ ಎಂದು ಬಿಂಬಿಸುವ ಮೂಲಕ ಮತೀಯವಾದಕ್ಕೆ ಪಿಎಫ್‌ಐ ಮತ್ತು ಅದರ ಸಹವರ್ತಿಗಳು ಯತ್ನಿಸುತ್ತಿದ್ದರು. ಪಿಎಫ್‌ಐನ ಹಲವು ಕಾರ್ಯಕರ್ತರು ಜಾಗತಿಕ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಂಡ ಬಗ್ಗೆ ಪುರಾವೆ ಲಭ್ಯವಾಗಿದೆ ಎನ್ನಲಾಗಿದೆ.
8) ಬಾಹ್ಯ ಅಂದರೆ ಹೊರ ದೇಶದ ಸಂಪನ್ಮೂಲ ಮತ್ತು ಸೈದ್ಧಾಂತಿಕ ಬೆಂಬಲದಿಂದ ಪಿಎಫ್‌ಐ ದೇಶದ ಸಾಂವಿಧಾನಿಕ ಅಧಿಕಾರಕ್ಕೆ ಅಗೌರವ ತೋರುತ್ತಿದೆ. ಇದು ಭಾರತದ ಆಂತರಿಕ ಭದ್ರತೆಗೆ ಆತಂಕ ತಂದೊಡ್ಡಿದೆ. ತಮ್ಮ ಸಿದ್ಧಾಂತ ಒಪ್ಪದವರನ್ನು ಕೊಲೆ ಮಾಡಿದ, ದುಷ್ಕೃತ್ಯ ನಡೆಸಲು ಸ್ಫೋಟಕಗಳನ್ನು ಸಂಗ್ರಹಿಸಿದ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಲು ಸಂಚು ರೂಪಿಸಿದ ಬಗ್ಗೆ ಪುರಾವೆಗಳು ಸಿಕ್ಕಿವೆ.
9) ಸಂಜಿತ್ (ಕೇರಳ 2021), ವಿ.ರಾಮಲಿಂಗಮ್ (ತಮಿಳುನಾಡು 2019), ನಂದು (ಕೇರಳ 2021), ಅಭಿಮನ್ಯು (ಕೇರಳ 2018), ಬಿಬಿನ್ (ಕೇರಳ 2017), ಶರತ್ (ಕರ್ನಾಟಕ 2017), ಆರ್.ರುದ್ರೇಶ್ (ಕರ್ನಾಟಕ 2016), ಪ್ರವೀಣ್ ಪೂಜಾರಿ (ಕರ್ನಾಟಕ 2016), ಶಶಿ ಕುಮಾರ (ತಮಿಳುನಾಡು 2016) ಮತ್ತು ಪ್ರವೀಣ್ ನೆಟ್ಟಾರು (ಕರ್ನಾಟಕ 2022) ಅವರ ಕೊಲೆಗಳು ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಪಿಎಫ್‌ಐ ಭಾಗಿಯಾಗಿದೆ. ಸಾರ್ವಜನಿಕ ನೆಮ್ಮದಿಗೆ ಭಂಗ ತರುವುದು ಹಾಗೂ ಭಯ ಹೆಚ್ಚಿಸುವ ಉದ್ದೇಶವನ್ನು ಪಿಎಫ್‌ಐ ಹೊಂದಿದೆ.
10) ಅಕ್ರಮ ಹಣ ವರ್ಗಾವಣೆಗಾಗಿ ಹವಾಲಾ ಮಾರ್ಗವನ್ನು ಪಿಎಫ್‌ಐ ಅನುಸರಿಸುತ್ತಿದೆ. ದೇಶದ ಒಳಗೆ ಮತ್ತು ಹೊರಗಿನಿಂದ ಹಣ ಸಂಗ್ರಹಿಸಿ, ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿ ಅಪರಾಧ, ಕಾನೂನುಬಾಹಿರ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.
11) ಪಿಎಫ್‌ಐ ಕಾರ್ಯಕರ್ತರ ಹೆಸರಿನಲ್ಲಿರುವ ಹಲವು ಬ್ಯಾಂಕ್ ಖಾತೆಗಳಲ್ಲಿರುವ ಹಣದ ಮೊತ್ತವು ಅವರ ಆದಾಯ ಮೂಲಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಾಗಿದೆ. ಸೊಸೈಟಿಸ್ ಕಾಯ್ದೆಯ ಅನ್ವಯ ನೋಂದಾಯಿಸಿಕೊಂಡಿರುವ ಪಿಎಫ್‌ಐ ನೋಂದಣಿ ವೇಳೆ ಘೋಷಿಸಿಕೊಂಡಿರುವ ಆಶಯಗಳನ್ನು ಸಂಪೂರ್ಣ ಉಲ್ಲಂಘಿಸಿದೆ. ಹೀಗಾಗಿಯೇ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆ 1961 ರ 12 ಎ ಮತ್ತು 12 ಎಎ ಅನ್ವಯ ಪಿಎಫ್‌ಐ ಹಾಗೂ ರಿಹ್ಯಾಬ್ ಫೌಂಡೇಶನ್ ಗೆ ನೀಡಿದ್ದ ವಿನಾಯಿತಿಗಳನ್ನು ರದ್ದುಪಡಿಸಿದೆ.
12) ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್ ಸರ್ಕಾರಗಳು ಪಿಎಫ್‌ಐ ನಿಷೇಧಿಸುವಂತೆ ಶಿಫಾರಸು ಮಾಡಿವೆ.
ಈ ಎಲ್ಲ ಕಾರಣಗಳಿಂದ ಕೇಂದ್ರ ಸರ್ಕಾರವು ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕಾನೂನು ಬಾಹಿರ ಸಂಘಟನೆಗಳು ಎಂದು ಘೋಷಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಕೇಂದ್ರ ಸರ್ಕಾರವು 'ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ' 1967 ರ ಅನ್ವಯ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಈ ನಿಷೇಧ ಆದೇಶವು ಮುಂದಿನ
ಐದು ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ :ಪಿಎಫ್ಐ ಬ್ಯಾನ್ ಮಾಡಿರುವುದು ಮುಸ್ಲಿಮರಲ್ಲಿಯೂ ಖುಷಿ ಮೂಡಿಸಿದೆ: ಚಕ್ರವರ್ತಿ ಸೂಲಿಬೆಲೆ