ಮಂಗಳೂರು:ಬಿಲ್ಲವ ಈಡಿಗ ಸಮುದಾಯಕ್ಕೆ ಸಂಬಂಧಿಸಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಜ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಕೈಗೊಂಡಿರುವ ಪಾದಯಾತ್ರೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಚಿಂತನೆಗೆ ವಿರುದ್ಧವಾಗಿದೆ. ಆದ್ದರಿಂದ ನಾರಾಯಣ ಗುರುಗಳ ತತ್ವಚಿಂತನೆ ಅನುಸರಿಸುವ ಯಾರೂ ಕೂಡ ಈ ಪಾದಯಾತ್ರೆ ಬೆಂಬಲಿಸಬೇಡಿ ಎಂದು ಶ್ರೀ ನಾರಾಯಣ ಗುರುಗಳ ವಂಶಸ್ಥ ಸ್ವಾಮಿ ಭದ್ರಾನಂದ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮದ್ಯಪಾನ, ಮದ್ಯ ಮಾರಾಟವನ್ನು ಬೆಂಬಲಿಸುವ ರೀತಿ ಪ್ರಣವಾನಂದ ಸ್ವಾಮೀಜಿ ಮಾತನಾಡುತ್ತಿದ್ದಾರೆ. ನಾರಾಯಣ ಗುರುಗಳು ಮದ್ಯಪಾನದ ವಿರೋಧಿಯಾಗಿದ್ದರು. ಆದರೆ ಅವರು ಶೇಂದಿ ಇಳಿಸುವುದನ್ನು ಪ್ರೋತ್ಸಾಹಿಸುವ ಮೂಲಕ ಬಿಲ್ಲವ ಸಮುದಾಯವನ್ನು ದಾರಿತಪ್ಪಿಸುವ ಕಾರ್ಯವನ್ನು ಪ್ರಣಾವನಂದ ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಅಪಾದಿಸಿದರು.
ಪ್ರಣವಾನಂದ ವಿರುದ್ಧ ಪ್ರಕರಣ: ಶ್ರೀ ಪ್ರಣವಾನಂದ ಸ್ವಾಮೀಜಿ ವಿರುದ್ಧ ಬಹಳಷ್ಟು ಪ್ರಕರಣಗಳು ದಾಖಲಾಗಿವೆ. ಆದರೆ ಸರ್ಕಾರ ಇವರ ಮೇಲೊಂದು ಕಣ್ಣೀಡಬೇಕು. ಮನಸ್ಸಿಗೆ ತಿಳಿದಂತೆ ಏನೇನೋ ಉಪದೇಶ ನೀಡಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಶ್ರೀ ಪ್ರಣವಾನಂದ ಸ್ವಾಮೀಜಿಗೆ ಶ್ರೀನಾರಾಯಣ ಗುರುಗಳ ಪರಂಪರೆಯ ಹಿನ್ನೆಲೆ ಇಲ್ಲ ಎಂದು ಸ್ವಾಮಿ ಭದ್ರಾನಂದ ಹೇಳಿದರು. ಪ್ರತಿ ವರ್ಷ 20ಮಂದಿ ಮದ್ಯ ಸೇವನೆಯಿಂದ ಮೃತರಾಗುತ್ತಿದ್ದಾರೆ. ನಿರುದ್ಯೋಗ, ಕುಡಿಯುವ ನೀರು, ಬಡತನ, ಕೃಷಿ ಹೀಗೆ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಕುರಿತಾಗಿ ಅವರು ಪಾದಯಾತ್ರೆ ಮಾಡಬಹುದು. ಅದೇ ರೀತಿ ಮದ್ಯಸೇವನೆ ನಿಲ್ಲಿಸಲು ಪಾದಯಾತ್ರೆ ಮಾಡಿದ್ದರೆ ಅದು ಉತ್ತಮ ಕಾರ್ಯವಾಗುತ್ತಿತ್ತು. ಆದರೆ ಪ್ರಣವಾನಂದ ಸ್ವಾಮೀಜಿ ಅವರು ಶೇಂದಿ ಇಳಿಸಲು ಸರ್ಕಾರ ಅವಕಾಶ ಕೊಡಬೇಕೆಂದು ಎಂದು ಬೇಡಿಕೆಯಿಟ್ಟು ಬಿಲ್ಲವ ಸಮುದಾಯವನ್ನು ವಂಚಿಸುವುದಲ್ಲದೇ, ಕಾವಿಗೂ ಕಳಂಕವನ್ನು ತಂದಿದ್ದಾರೆ ಎಂದು ಆರೋಪಿಸಿದ್ದಾರೆ.