ಮಂಗಳೂರು:ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪನೆಯ ರಾಜ್ಯ ಸರ್ಕಾರದ ಆದೇಶ ಪ್ರತಿಯನ್ನು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಅವರು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಆಕ್ರೋಶಿತರಾದ ಸ್ವಾಮೀಜಿ ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸದೆ ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದೀಗ ಸರ್ಕಾರ ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪಿಸಲು ಹೊರಟಿದೆ. ಇದರಲ್ಲಿ ಹಿಂದೆ-ಮುಂದೆ ಯಾವುದು ಇಲ್ಲ. ಮೇಲಿನ ವರ್ಗದವರಿಗೆ ನಿಗಮ ಕೊಡುವ ರಾಜ್ಯ ಸರ್ಕಾರ ನಮ್ಮ ಮಾತಿಗೆ ಸೊಪ್ಪು ಹಾಕುತ್ತಿಲ್ಲ. ಇದು ಸರ್ಕಾರದ ನಾಟಕ ಎಂದು ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪನೆ ಕುರಿತ ರಾಜ್ಯ ಸರ್ಕಾರದ ಆದೇಶ ಪ್ರತಿಯನ್ನು ಹರಿದು ಹಾಕಿದರು.
ಈ ಕೋಶವನ್ನು ಸರ್ಕಾರದ ಯಾವಾಗ ಬೇಕಾದರೂ ತೆಗೆದು ಹಾಕಬಹುದು. ಇದಕ್ಕೊಂದು ಅಧ್ಯಕ್ಷ, ಡೈರೆಕ್ಟರ್ ಇಲ್ಲ. ಅದಕ್ಕೆ ನಿವೃತ್ತ ಸರ್ಕಾರಿ ಅಧಿಕಾರಿ ಅಥವಾ ನಿವೃತ್ತ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಸರ್ಕಾರ ಇದನ್ನು ಕಾಟಚಾರಕ್ಕೆ ಮಾಡುತ್ತಿದೆ. ಆದ್ದರಿಂದ ನಮ್ಮ ಸಮುದಾಯಕ್ಕೆ ದ್ರೋಹ ಎಸಗಿರುವ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ ಎಂದರು.
ಜ.6ರಂದು ಪಾದಯಾತ್ರೆ:ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.6ರಂದು ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಿಂದ ಬೆಂಗಳೂರುವರೆಗೆ 658 ಕಿ.ಮೀ. ದೂರದ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪನೆಯ ರಾಜ್ಯ ಸರ್ಕಾರದ ಆದೇಶ ಪ್ರತಿ ಹರಿದು ಹಾಕಿದ ಪ್ರಣವಾನಂದ ಸ್ವಾಮೀಜಿ ಅಮರಣಾಂತ ಉಪವಾಸ ಸತ್ಯಾಗ್ರಹ:ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಪಾದಯಾತ್ರೆಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಚಾಲನೆ ನೀಡಲಿದ್ದಾರೆ. ಬಳಿಕ ಪಾದಯಾತ್ರೆ ಉಡುಪಿ, ಬ್ರಹ್ಮಾವರ, ಮಾಸ್ತಿಕಟ್ಟೆ ಹೊಸನಗರವಾಗಿ ತೀರ್ಥಹಳ್ಳಿ, ಸಾಗರ, ಶಿವಮೊಗ್ಗ, ಚೆನ್ನಗಿರಿ, ಶಿಕಾರಿಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಸುಮಾರು 35 ದಿನಗಳವರೆಗೆ ಈ ಪಾದಯಾತ್ರೆಯು ದಿನಕ್ಕೆ 20 ಕಿ.ಮೀ.ನಂತೆ ಸಾಗಿದ ಬಳಿಕ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ತಾವು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇವೆ ಎಂದು ಸ್ವಾಮೀಜಿ ಘೋಷಿಸಿದರು.
ಫಾರ್ಚೂನ್ ಕಾರು, 25 ಎಂಐಸಿಎಲ್ ಶಾಪ್ ಆಫರ್: ನಮಗೆ ಬೆದರಿಕೆಯ ಜತೆಗೆ ಆಫರ್ ಕೂಡಾ ಬಂದಿದೆ. ವಿಧಾನಸಭೆ ಎಲೆಕ್ಷನ್‌ವರೆಗೂ ಇದನ್ನು ನಿಲ್ಲಿಸಿ ಸ್ವಾಮೀಜಿ. ನಿಮಗೆ 25 ಎಂಐಸಿಎಲ್ ಶಾಪ್‌ಗಳನ್ನು ನೀವು ಹೇಳಿದ ಕಡೆ ಮಾಡಿ ಕೊಡ್ತೇನೆ. ಒಂದು ಫಾರ್ಚೂನ್ ಕಾರು, ಬೆಂಗಳೂರಿನಲ್ಲಿ 2 ಸೈಟ್ ಕೊಡ್ತೇನೆ. ಈ ಹೋರಾಟವನ್ನು ಕೈಬಿಡಬೇಕು ಅಂತಾ ಹೇಳಿದ್ದಾರೆ. ನಾನು ಅವರ ಹೆಸರನ್ನು ಹೇಳಲು ಇಷ್ಟ ಪಡೋದಿಲ್ಲ. ಸಂದರ್ಭ ಬಂದಾಗ ಹೇಳುತ್ತೇನೆ ಎಂದರು.
ಇದನ್ನೂ ಓದಿ:ಬಿಲ್ಲವ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ