ಕರ್ನಾಟಕ

karnataka

By

Published : Feb 13, 2023, 7:50 PM IST

ETV Bharat / state

ಕಾರ್ಕಳದಿಂದ ಸ್ಫರ್ಧಿಸಲು ಬಿಜೆಪಿ ನಾಯಕರಿಂದಲೇ ನನಗೆ ಸಹಕಾರ: ಪ್ರಮೋದ್ ಮುತಾಲಿಕ್

ಈ ಬಾರಿ ಚುನಾವಣೆ ಸಮಯದಲ್ಲಿ ಪ್ರವೇಶ ನಿರ್ಬಂಧ ಮಾಡಿದ್ದೇ ಆದಲ್ಲಿ ಹೊರಗಡೆ ಇದ್ದುಕೊಂಡೇ ಚುನಾವಣೆ ಗೆದ್ದು ತೋರಿಸುತ್ತೇನೆ‌ ಎಂದು ಪ್ರಮೋದ್​ ಮುತಾಲಿಕ್​ ಹೇಳಿದರು.

ಪ್ರಮೋದ್​ ಮುತಾಲಿಕ್
ಪ್ರಮೋದ್​ ಮುತಾಲಿಕ್

ಪ್ರಮೋದ್​ ಮುತಾಲಿಕ್​ ಮಾಧ್ಯಮಗೋಷ್ಠಿ

ಮಂಗಳೂರು: ಕಾರ್ಕಳದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಸಿಎಂ ಆಕಾಂಕ್ಷಿಗಳು ನನಗೆ ತನುಮನ ಧನದ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೊಸ ಹೇಳಿಕೆ ನೀಡಿದ್ದಾರೆ. ನಗರದ ಆರ್ಯ ಸಮಾಜದ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಕಾರ್ಕಳದ ಹಾಲಿ‌ ಶಾಸಕರು ಮುಂದಿನ ಸಿಎಂ ಎಂದು ಹೇಳಲಾಗುತ್ತಿರುವುದರಿಂದ, ಸೂಟು ಬೂಟು ಹೊಲಿಸಿಕೊಂಡು‌ ಸಾಲಾಗಿ ಸರಣಿಯಲ್ಲಿ ನಿಂತಿರುವ ಮುಖ್ಯಮಂತ್ರಿ ಆಕಾಂಕ್ಷಿಗಳು ನಾನು ಕಾರ್ಕಳದಲ್ಲಿ ಚುನಾವಣೆ ಎದುರಿಸಲು‌ ಸಹಕಾರ ನೀಡುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಅಸಲಿ ಹಿಂದುತ್ವ ಹಾಗೂ ನಕಲಿ ಹಿಂದುತ್ವ, ಭ್ರಷ್ಟಾಚಾರ - ಪ್ರಾಮಾಣಿಕತೆ ಇವರೆಡು ವಿಚಾರವನ್ನು ಮುಂದಿಟ್ಟು ಚುನಾವಣೆ ಕಣಕ್ಕೆ ಇಳಿಯಲಿದ್ದೇನೆ. ಕಾರ್ಕಳದ ಇಂದಿನ ಶಾಸಕರು 2004ರಲ್ಲಿ ಚುನಾವಣೆ ಎದುರಿಸಿದಾಗ ಘೋಸಿರುವ ಆಸ್ತಿ ಎಷ್ಟಿತ್ತು‌ ಹಾಗೂ 3 ಬಾರಿ ಗೆದ್ದ ಬಳಿಕ ಇಂದಿನ ಆಸ್ತಿಯ ಮೌಲ್ಯ ಎಷ್ಟು ಹೆಚ್ಚಾಗಿದೆ ನೋಡಿದಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ತಿಳಿಯಲು ಸಾಧ್ಯ ಎಂದರು.

ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ: 2014ರಿಂದಲೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ನನಗೆ ರಾಜಕೀಯದ ಅರಿವಿರದ ಕಾರಣ ನಾನು ವಿಫಲವಾಗುತ್ತಿದ್ದೇನೆ. ಪ್ರಾಮಾಣಿಕತೆ, ನೇರಮಾತು ನನ್ನ ರಾಜಕೀಯದ ಮುಂದುವರಿಕೆಗೆ ಮುಳ್ಳಾಗಿದೆ. ಬಕೆಟ್ ಹಿಡಿದಿದ್ದಲ್ಲಿ, ಭ್ರಷ್ಟಾಚಾರ, ಡೋಂಗಿ ಹಿಂದುತ್ವಕ್ಕೆ ಸಹಕರಿಸಿದ್ದೇ ಆದಲ್ಲಿ ನಾನಿಂದು ಎಲ್ಲಿಯೋ ಹೋಗುತ್ತಿದ್ದೆ. ಆದ್ದರಿಂದ ಈ ಬಾರಿ ನಾನು ಪಕ್ಷೇತರ ಅಭ್ಯರ್ಥಿಯೆಂದು ಘೋಷಿಸಿ ನೇರವಾಗಿ ಚುನಾವಣಾ ಕಣಕ್ಕಿಳಿದಿದ್ದೇನೆ ಎಂದು ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿರುವ ನನ್ನಲ್ಲಿ ಚುನಾವಣೆ ಎದುರಿಸಲು ದುಡ್ಡಿಲ್ಲ, ಬ್ಯಾಂಕ್ ಖಾತೆಯಿಲ್ಲ. ಆದ್ದರಿಂದ ಜನರಲ್ಲಿ ಮತದೊಂದಿಗೆ ನೂರರ ನೋಟು ಕೊಡಿ ಎಂದು ಕೂಡಾ ಕೇಳುತ್ತಿದ್ದೇನೆ. ಸಾವಿರಾರು ಮಂದಿ ಈಗ ಸಹಕರಿಸುತ್ತಲೂ ಇದ್ದಾರೆ. ಆದ್ದರಿಂದ ನನಗೆ ದುಡ್ಡಿನ ಕೊರತೆಯಾಗುವುದಿಲ್ಲ. ಈ ಮೂಲಕ ಹಿಂದುತ್ವದ ವಿಜಯ ಕಾರ್ಕಳದಿಂದ ಹೊಸ ಇತಿಹಾಸ ಬರೆಯಲಿದೆ ಎಂದು ತಿಳಿಸಿದರು.

ಇನ್ನು ನನ್ನ ಮೇಲೆ ಹಾಕಿರುವ 109 ಪ್ರಕರಣಗಳಲ್ಲಿ ಅಧಿಕ ಕೇಸ್ ದಾಖಲಿಸಿದ್ದೇ ಬಿಜೆಪಿ. ಗಡಿಪಾರು, ನಿರ್ಬಂಧನೆ ಅಧಿಕವಾಗಿ ವಿಧಿಸಿದ್ದು ಕೂಡಾ ಬಿಜೆಪಿ ಸರಕಾರವೇ. ಆದ್ದರಿಂದ ಚುನಾವಣೆ ವೇಳೆ ನಿರ್ಬಂಧನೆ ಎಂಬುವುದು ಮಾಡಲಿಕ್ಕಿಲ್ಲ. ಮಾಡಿದ್ದಲ್ಲಿ ಉಲ್ಟಾ ಹೊಡೆಯುತ್ತದೆ. ಪ್ರವೇಶ ನಿರ್ಬಂಧ ಮಾಡಿದ್ದಲ್ಲಿ ಕೋರ್ಟ್​ಗೆ ಹೋಗದೇ ನಾನು ಹೊರಗಡೆ ಇದ್ದುಕೊಂಡೇ ಚುನಾವಣೆ ಗೆದ್ದು ತೋರಿಸುತ್ತೇನೆ‌ ಎಂದರು.

ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ :ರಾಜ್ಯದಲ್ಲಿ 34,500 ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆಗೆ ಒಳಗೊಂಡಿದ್ದು, ಈ ದೇವಸ್ಥಾನಗಳಿಂದ 1,500 ಸಾವಿರ ಕೋಟಿ ರೂ. ಪ್ರತೀ ವರ್ಷ ಆದಾಯ ಬರುತ್ತಿದೆ. ಆದರೆ ರಸ್ತೆ, ಚರಂಡಿಗೆಂದು ಸರಕಾರ ಈ ಹಣವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಹಿಂದೂ ಸಂಪ್ರದಾಯ, ಹಿಂದುತ್ವವನ್ನು ಉಳಿಸುತ್ತೇವೆ ಎಂದು ಹೇಳುವ ಬಿಜೆಪಿ ಸರಕಾರವೂ ಇದನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ಆರೋಪಿಸಿದರು.

ಗೋಶಾಲೆ, ವೇದಪಾಠ ಶಾಲೆಗಳು ಮಾಡಬೇಕು, ಅರ್ಚಕರಿಗೆ, ಶಿಲ್ಪ ಕಲಾಕಾರರಿಗೆ ಸಕಲ ವ್ಯವಸ್ಥೆ, ದೇವಸ್ಥಾನಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮುಂದಿನ ಬಜೆಟ್​ನಲ್ಲಿ ಸಿಎಂ ಬೊಮ್ಮಾಯಿಯವರು ಈ ಎಲ್ಲಾ ಅಂಶಗಳಿಗೆ ಅನುದಾನ ಘೋಷಣೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಪ್ರೇಮಿಗಳ ದಿನಾಚರಣೆಗೆ ಕಾನೂನುಬದ್ಧ ತಡೆ :ಪ್ರತಿಬಾರಿಯಂತೆ ಪ್ರೇಮಿಗಳ ದಿನಾಚರಣೆಗೆ ಈ ಬಾರಿಯೂ ನಮ್ಮ ವಿರೋಧವಿದೆ. ಆದ್ದರಿಂದ ನಾಳೆಯೂ ರಾಜ್ಯಾದ್ಯಂತ ಪೊಲೀಸರೊಂದಿಗೆ ಪ್ರೇಮಿಗಳ ದಿನದ ನೆಪದಲ್ಲಿ ಅನೈತಿಕತೆ ನಡೆಯುವುದನ್ನು ಕಾನೂನು ಬದ್ದವಾಗಿ ತಡೆಯಲಿದ್ದೇವೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್​ನ ಫ್ರೀ ವಿದ್ಯುತ್​ಗೆ ಸದನದಲ್ಲಿ ಟಾಂಗ್ ನೀಡಿದ ಇಂಧನ ಸಚಿವ ಸುನೀಲ್ ಕುಮಾರ್..!

ABOUT THE AUTHOR

...view details