ಮಂಗಳೂರು:ಕ್ರೀಡೆಯಲ್ಲಿ ತೊಡಗಿಸಿಕೊಂಡು ದಾಖಲೆ ಸೃಷ್ಟಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ತನ್ನದೇ ಸಾಮರ್ಥ್ಯದ ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಸರ್ವಶ್ರೇಷ್ಠ ಸಾಧನೆ ಮಾಡುವುದೆಂದರೆ ಅದು ಅಷ್ಟು ಸುಲಭದ ಸಂಗತಿಯಲ್ಲ. ಮನಸ್ಸಿನಲ್ಲಿ ಗೆದ್ದೇ ಗೆಲ್ಲಬೇಕು ಎನ್ನುವ ಅಚಲ ವಿಶ್ವಾಸ ಬೇಕು. ಇದಕ್ಕೆ ಸಾಕ್ಷಿಯಾದವರು ಈ ಕಡಲತೀರದ ಕುವರ ಪ್ರದೀಪ್ ಕುಮಾರ್ ಆಚಾರ್ಯ.
ನಗರದ ಉರ್ವಸ್ಟೋರ್ ನಿವಾಸಿ ಮುಕ್ಕ ರವೀಶ್ ಆಚಾರ್ಯ ಹಾಗೂ ಪ್ರೇಮ ದಂಪತಿಯ ದ್ವಿತೀಯ ಪುತ್ರ ಪ್ರದೀಪ್ ಕುಮಾರ ಆಚಾರ್ಯ, ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ಹಾಗೂ 2011ರಲ್ಲಿ ಮಂಗಳೂರು ಯುನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದ ಇವರು ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರು 2015 ರಿಂದ 83 ಕೆಜಿ ದೇಹ ತೂಕದಲ್ಲಿ ಸೀನಿಯರ್ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜ್ಯಮಟ್ಟದಲ್ಲಿ 18, ರಾಷ್ಟ್ರಮಟ್ಟದಲ್ಲಿ 21 ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 12 ಪದಕಗಳನ್ನು ಗಳಿಸಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಹೆಮ್ಮೆ ಎನಿಸಿಕೊಂಡಿದ್ದಾರೆ. 2017 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ, 2018 ದುಬೈನಲ್ಲಿ ನಡೆದ ಏಷ್ಯನ್ ಬೆಂಚ್ ಪ್ರೆಸ್ನಲ್ಲಿ ಕಂಚಿನ ಪದಕ, 2019 ಮಾರ್ಚ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಷ್ಯನ್ ಓಕಾನಿಯ ಪವರ್ ಲಿಫ್ಟಿಂಗ್ನಲ್ಲಿ ಚಿನ್ನ, 2019 ಏಪ್ರಿಲ್ನಲ್ಲಿ ಹಾಂಕಾಂಗ್ನಲ್ಲಿ ನಡೆದ ಏಶ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಹಾಗೂ ಕೆನಡಾದಲ್ಲಿ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಹಾಗೂ ಬೆಂಚ್ ಪ್ರೆಸ್ ಚಾಂಪಿಯನ್ಷಿಪ್-2019 ಸ್ಪರ್ಧೆಯಲ್ಲಿ ಅವಳಿ ಚಿನ್ನದ ಪದಕದೊಂದಿಗೆ ಪಂದ್ಯಾಕೂಟದ 'ಬೆಸ್ಟ್ ಲಿಪ್ಟರ್' ಬಿರುದು ಸಹ ತನ್ನದಾಗಿಸಿಕೊಂಡಿದ್ದಾರೆ.