ಕಡಬ: ಅಚ್ಛೇ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ ಎಂದು ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಹೇಳಿದ್ರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆಡಳಿತದಲ್ಲಿ ಜನರ ಬೇಡಿಕೆಗಳನ್ನು ಧಿಕ್ಕರಿಸಿ, ಸರ್ವಾಧಿಕಾರಿ ಆಡಳಿತ ನಡೆಸಿ ಜನರ ಬದುಕಿಗೆ ಕಂಟಕವಾಗಿರುವ ಇಂದಿನ ಬಿಜೆಪಿ ಸರ್ಕಾರ ದೇಶಾದ್ಯಂತ ಜನರನ್ನು ಮರಳುಗೊಳಿಸಿ ಅಚ್ಛೇ ದಿನ್ ಆಯೇಗಾ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತ ಅಧಿಕಾರ ಪಡೆದಿದೆ. ಇತ್ತ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ದಿನಕ್ಕೊಂದು ಜನವಿರೋಧಿ ಕಾನೂನನ್ನು ತಂದು ಜನರನ್ನು ಸಂಕಷ್ಟಕ್ಕೀಡುಮಾಡುತ್ತಿದೆ ಎಂದು ಆರೋಪಿಸಿದರು.
ಅಚ್ಛೇ ದಿನ್ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಹಿಟ್ಲರ್ ನೀತಿ: ಪಿ.ಪಿ. ವರ್ಗೀಸ್ ಟೀಕೆ ಸರ್ಕಾರ ಬಂದಾಗಿನಿಂದ ನೋಟ್ ಬ್ಯಾನ್ ಮಾಡಿ, ಜಿಎಸ್ಟಿಯನ್ನು ಜನರ ಮೇಲೆ ಹೇರಿ, ವ್ಯವಹಾರ ದುಡಿಮೆ ಇಲ್ಲದೆ ಜನರು ಸಂಕಷ್ಟದಲ್ಲಿ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಯುವ ಜನತೆ ಉದ್ಯೋಗವಿಲ್ಲದೆ ನಿರೂದ್ಯೋಗಿಗಳಾಗಿದ್ದು, ಕುಟುಂಬ ನಿರ್ವಹಣೆಗೂ ಪರದಾಡುವಂತಾಗಿದೆ. ನಮ್ಮ ಕರಾವಳಿ ಭಾಗದದಲ್ಲಂತೂ ಕೃಷಿಯೇ ಮೂಲ ಆದಾಯವಾಗಿದ್ದು, ಮುಖ್ಯ ಬೆಳೆ ಅಡಿಕೆ, ತೆಂಗು, ರಬ್ಬರ್, ಕಾಳು ಮೆಣಸು ಸೇರಿದಂತೆ ದಿನ ಬಳಕೆಯ ವಸ್ತುಗಳಿಗೆ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 2020ಕ್ಕೆ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ವಿದೇಶಿ ವಸ್ತುಗಳಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಉತ್ಸುಕರಾಗಿದ್ದಾರೆ ಎಂದು ವರ್ಗೀಸ್ ವಾಗ್ದಾಳಿ ನಡೆಸಿದರು.
ಅನ್ನ ಭಾಗ್ಯ, ಕ್ಷೀರ ಭಾಗ್ಯ, ಆರೋಗ್ಯ ಸೇವೆ ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುತ್ತಿದ್ದ ಬಡಪಾಯಿಗಳ ಮೇಲೆ ಈಗ ಗದಾಪ್ರಹಾರ ಮಾಡಿ ಸಣ್ಣಪುಟ್ಟ ಕಾರು ಇರುವ ಮಧ್ಯಮ ವರ್ಗದ ಬಿಪಿಲ್ ಪಡಿತರವನ್ನೂ ರದ್ದುಪಡಿಸಿ ಸಾವಿರಾರು ದಂಡ ವಸೂಲಿ ಮಾಡುತ್ತಿರುವುದು ಮುಂದಿನ ಆತಂಕಕಾರಿ ದಿನಗಳ ಸೂಚನೆ ನೀಡುತ್ತಿದೆ ಎಂದರು.
ಅದೆಷ್ಟೋ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ತಂದು ಭೂರಹಿತರಿಗೆ ಭೂಮಿ, ಭೂ ಮಸೂದೆ , ಅಕ್ರಮ ಸಕ್ರಮ, ಕುಮ್ಕಿ ಹಕ್ಕು 94ಸಿ 94 ಸಿಸಿ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಭೂಮಂಜೂರಾತಿ ನೀಡಿ ಹಕ್ಕುಪತ್ರ ನೀಡಿದ್ದಲ್ಲದೆ ಸೂರು ಇಲ್ಲದವರಿಗೆ ಸೂರು, ಬಡ್ಡಿರಹಿತ ಸಾಲ, ಸಾಲ ಮನ್ನಾ ಮಾಡುವ ಮೂಲಕ ರೈತರ ಬದುಕನ್ನು ಹಸನಾಗಿಸಿದೆ. ಆದರೀಗ ಎಲ್ಲವನ್ನೂ ನಿಲ್ಲಿಸಿ ಜನರ ಬದುಕಿನ ಮೇಲೆ ಚೆಲ್ಲಾಟವಾಡುವ ಬಿಜೆಪಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಜನಪರ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು ಪಿ ಪಿ ವರ್ಗೀಸ್ ಒತ್ತಾಯಿಸಿದ್ದಾರೆ.