ಪುತ್ತೂರು (ದಕ್ಷಿಣ ಕನ್ನಡ) :ಆಶ್ರಯ ಮನೆಯ ಆಸೆಯಲ್ಲಿ ಇದ್ದ ಮನೆಯನ್ನೂ ಕೆಡವಿ ಬಡ ಕುಟುಂಬವೊಂದು ಬೀದಿಗೆ ಬಿದ್ದಿದೆ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿನ ಸುದ್ದಿ ಇದು. ಮನೆ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಈ ಕುಟುಂಬ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ಬದುಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ.
ಕಡ್ಯ ಗ್ರಾಮದ ಮೋನಪ್ಪ ಎಂಬವರ ಕುಟುಂಬ ಆಶ್ರಯ ಮನೆಗಾಗಿ ಕಳೆದ ವರ್ಷ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿತ್ತು. ಈ ನಡುವೆ ಇತ್ತೀಚೆಗಷ್ಟೇ ಇವರ ಕುಟುಂಬಕ್ಕೆ ಆಶ್ರಯ ಮನೆಯನ್ನು ಪಂಚಾಯತ್ ವತಿಯಿಂದ ಮಂಜೂರು ಮಾಡಲಾಗಿತ್ತು. ಆಶ್ರಯ ಮನೆ ಮಂಜೂರಾದ ಹಿನ್ನೆಲೆಯಲ್ಲಿ ಇದ್ದ ಮನೆಯನ್ನು ಕೆಡವಿ ಹೊಸ ಮನೆಗೆ ಅಡಿಪಾಯ ಹಾಕಿದ್ದ ಕುಟುಂಬ ಪಂಚಾಯತ್ ಹಣ ಬಿಡುಗಡೆಯಾಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಕೈ ಸಾಲ ಪಡೆದು ಅಡಿಪಾಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.
ಇದನ್ನೂ ಓದಿ :ತನ್ನದೇ ಮನೆಗಾಗಿ ಮಕ್ಕಳ ಜೊತೆ ಮನೆ ಮುಂದೆ ಪ್ರತಿಭಟನೆಗೆ ಕುಳಿತ ತಾಯಿ
ಆದರೆ, ಅಡಿಪಾಯ ಹಾಕಿ ಮೂರು ತಿಂಗಳು ಕಳೆದರೂ ಮೊದಲ ಕಂತಿನ ಅನುದಾನ ಬಿಡುಗಡೆಯಾಗದ ಕಾರಣ ಮನೆ ನಿರ್ಮಾಣದ ಕೆಲಸವನ್ನು ಮುಂದುವರಿಸಲು ಸಾಧ್ಯವಾಗದೇ ಅರ್ಧದಲ್ಲೇ ನಿಲ್ಲಿಸಲಾಗಿದೆ. ಹೊಸ ಮನೆಗಾಗಿ ಹಳೆ ಮನೆಯನ್ನು ಕೆಡವಿ ಹಾಕಿದ್ದ ಮೋನಪ್ಪ ಕುಟುಂಬ ಇದೀಗ ಅತ್ತ ಮನೆಯೂ ಇಲ್ಲ, ಇತ್ತ ಕುಳಿತುಕೊಳ್ಳಲೂ ಜಾಗವೂ ಇಲ್ಲದ ಸ್ಥಿತಿಯಲ್ಲಿದ್ದು, ಬೀದಿಗೆ ಬಂದಿದೆ.