ಮಂಗಳೂರು :ನಾಳೆ ನಡೆಯುವ ಗ್ರಾಪಂ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ತಾಲೂಕಿನ ಮತ ಎಣಿಕಾ ಕಾರ್ಯವು ನಗರದ ಬೋಂದೆಲ್ನಲ್ಲಿರುವ ಎಂಜಿಸಿ ಕಾಲೇಜಿನಲ್ಲಿ ನಡೆಯಲಿದ್ದು, ಪೂರ್ವ ಸಿದ್ಧತೆ ನಡೆಯುತ್ತಿದೆ. ಮತ ಎಣಿಕಾ ಕೇಂದ್ರಕ್ಕೆ ಅಧಿಕಾರಿಗಳನ್ನು ಹೊತರು ಪಡಿಸಿ ಇತರರಿಗೆ ನಿರ್ಬಂಧ ವಿಧಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಮಂಗಳೂರು, ಬಂಟ್ವಾಳ, ಮೂಡುಬಿದಿರೆ ತಾಲೂಕುಗಳ ಒಟ್ಟು 106 ಗ್ರಾಪಂಗಳಿಗೆ ಚುನಾವಣೆ ನಡೆದಿದೆ. 1,681 ಕ್ಷೇತ್ರಗಳಲ್ಲಿ 50 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 1,631 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.
ಗ್ರಾಪಂ ಚುನಾವಣಾ ಮತ ಎಣಿಕಾ ಕಾರ್ಯಕ್ಕೆ ಸಿದ್ಧತೆ 2ನೇ ಹಂತದಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ 114 ಗ್ರಾಪಂಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಒಟ್ಟು 1,541 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 41ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿ 1,500 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.
ಮೊದಲನೇ ಹಂತದ ಚುನಾವಣೆಯಲ್ಲಿ 2,217 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ಎರಡನೇ ಹಂತದಲ್ಲಿ 3,421 ಅಭ್ಯರ್ಥಿಗಳು ಕಣದಲ್ಲಿದ್ದರು. ಮೊದಲನೇ ಹಂತದಲ್ಲಿ 4,16,984 ಮಂದಿ ಮತ ಚಲಾಯಿಸಿ 74.43 ಶೇ. ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ ಒಟ್ಟು 3,87,107 ಮತದಾರರು ಮತ ಚಲಾಯಿಸಿ ಶೇ.78.70ರಷ್ಟು ಮತದಾನ ನಡೆದಿತ್ತು. ಮತಪೆಟ್ಟಿಗೆಯಲ್ಲಿ ಈ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ನಾಳೆ ಅದು ನಿರ್ಧಾರವಾಗಲಿದೆ.