ಉಡುಪಿ(ದಕ್ಷಿಣ ಕನ್ನಡ): ತಲಪಾಡಿಯಿಂದ ಕಾರ್ಮಿಕರನ್ನು ತುಂಬಿಕೊಂಡು ಕಲಬುರಗಿಗೆ ಹೊರಟಿದ್ದ ಖಾಸಗಿ ಬಸ್ಅನ್ನು ಹೆಜಮಾಡಿ ತಪಾಸಣಾ ಕೇಂದ್ರದಲ್ಲಿ ತಡೆಯಲಾಗಿದೆ. ಪೊಲೀಸರು ವಾಹನವನ್ನು ಮರಳಿ ತಲಪಾಡಿಗೆ ಕಳುಹಿಸಿದ್ದಾರೆ. ಗಾರೆ ಕೆಲಸ ನಿರ್ವಹಿಸುತ್ತಿದ್ದ ಛತ್ತೀಸ್ಘಡ ಮೂಲದ ಸುಮಾರು 26 ಜನ ಕಾರ್ಮಿಕರು ಲಾಕ್ಡೌನ್ ಹಿನ್ನೆಲೆ ತಾಯ್ನಾಡಿಗೆ ತೆರಳಲಾಗದೆ ಅಲ್ಲೇ ಉಳಿದಿದ್ದರು.
ಮಂಗಳೂರಿನಲ್ಲಿ ಛತ್ತೀಸ್ಘಡಕ್ಕೆ ತೆರಳುವ ರೈಲು ವ್ಯವಸ್ಥೆ ಇಲ್ಲದಿರುವುದರಿಂದ ಮಧ್ಯವರ್ತಿಯೋರ್ವನ ಸಹಾಯ ಪಡೆದ ಕಾರ್ಮಿಕರೆಲ್ಲರೂ ಇ-ಪಾಸ್ ಪಡೆದು ಕಲಬುರಗಿಯ ರೈಲು ನಿಲ್ದಾಣದವರೆಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲಿಂದ ರೈಲು ಮೂಲಕ ಛತ್ತೀಸ್ಘಡಕ್ಕೆ ತೆರಳುವವರಿದ್ದರು.
ಇಬ್ಬರು ಚಾಲಕರೊಂದಿಗೆ ಹೆಜಮಾಡಿಯ ಉಡುಪಿ ಗಡಿ ಭಾಗಕ್ಕೆ ಬಸ್ ಆಗಮಿಸಿದ್ದು, ತಪಾಸಣಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಾಪು ಪಿಎಸ್ಐ ರಾಜಶೇಖರ ಸಾಗನೂರು, ಬಸ್ ತಡೆದು ವಿಚಾರಿಸಿದರು. ಈ ವೇಳೆ ಕಾರ್ಮಿಕರಲ್ಲಿ ಓರ್ವ ಮಾತನಾಡಿ, ಕಲಬುರಗಿಯಿಂದ ರೈಲಿನಲ್ಲಿ ಹೋಗುವುದಾಗಿ ತಿಳಿಸಿದಾಗ, ಅಲ್ಲಿನ ಪ್ರಸಕ್ತ ಪರಿಸ್ಥಿತಿ ಕುರಿತು ಪಿಎಸ್ಐ ವಿವರಿಸಿದರು.
ಕಲಬುರಗಿಯಲ್ಲಿ ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ನೀವು ಮುಂಗಡ ಟಿಕೆಟ್ ಪಡೆಯದೆ ಕಲಬುರಗಿಯಲ್ಲಿ ಉಳಿಯಲು ಯಾವುದೇ ವ್ಯವಸ್ಥೆಯನ್ನೂ ಮಾಡದೆ, ಏಕಾಏಕಿ ಹೊರಟರೆ ಸಮಸ್ಯೆಯಲ್ಲಿ ಸಿಲುಕಬೇಕಾದೀತು. ಬಸ್ ನೇರವಾಗಿ ಛತ್ತೀಸ್ಘಡಕ್ಕೆ ಚಲಿಸುವುದೇ ಆದರೆ ಅನುಮತಿ ನೀಡುತ್ತೇವೆ. ಇಲ್ಲವಾದರೆ ಮಂಗಳೂರಿನಿಂದ ರೈಲು ಮೂಲಕ ಹೋಗುವಂತೆ ಮಾಹಿತಿ ನೀಡಿದರು.