ಕರ್ನಾಟಕ

karnataka

ETV Bharat / state

CEIR ಪೋರ್ಟಲ್​ನಿಂದ ಪೊಲೀಸರ ಪ್ರಯತ್ನ.. ಮತ್ತೆ 93 ಮೊಬೈಲ್ ಫೋನ್ ವಾರಸುದಾರರಿಗೆ ಹಸ್ತಾಂತರ

ಕಳೆದು ಹೋದ, ಸುಲಿಗೆಯಾಗಿದ್ದ ​ಫೋನ್​ಗಳನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಇಂದು ವಾರಸುದಾರರಿಗೆ ಹಸ್ತಾಂತರಿಸಿದರು‌.

police-returned-93-stolen-mobile-phones-to-their-owners-in-mangaluru
ಮಂಗಳೂರು: ಕಳೆದು ಹೋಗಿದ್ದ 93 ಮೊಬೈಲ್ ಫೋನ್​ಗಳನ್ನು ವಾರಸುದಾರರಿಗೆ ಮರಳಿಸಿದ ಪೊಲೀಸರು

By

Published : Jun 3, 2023, 7:12 PM IST

ಮಂಗಳೂರು: ನಗರ ಪೋಲಿಸರು ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) (www.ceir.gov.in) ಮೂಲಕ ಕಳೆದು ಹೋದ, ಸುಲಿಗೆಯಾಗಿದ್ದ 93 ಮೊಬೈಲ್ ಫೋನ್​ಗಳನ್ನು ವಾರಸುದಾರರಿಗೆ ಇಂದು ಹಸ್ತಾಂತರಿಸಿದ್ದಾರೆ. ಜನರಿಗೆ ಇಂದು ಸ್ಮಾರ್ಟ್ ಫೋನ್​ ಅವಶ್ಯಕ ವಸ್ತುವಾಗಿದೆ. ಯಾವುದೋ ಕಾರಣದಿಂದ ಈ ಮೊಬೈಲ್ ಫೋನ್​ಗಳು ಕಳೆದುಹೋಗುವುದು, ಕಳ್ಳತನವಾಗುವುದು ನಡೆಯುತ್ತಿರುತ್ತದೆ. ಈ ಮೊಬೈಲ್ ಫೋನ್​ಗಳು ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ ಫೋನ್​ ಕಳೆದುಕೊಂಡವರಲ್ಲಿ ಆತಂಕ ಹೆಚ್ಚಿರುತ್ತದೆ. ಈ ರೀತಿ ಆತಂಕಗೊಂಡವರಿಗೆ CEIR ಪೋರ್ಟಲ್ ನೆಮ್ಮದಿ ತಂದಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್​ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಆಗಿದ್ದ 93 ಮೊಬೈಲ್ ಫೋನ್​ಗಳನ್ನು ಸಿಐಇಆರ್ ಪೋರ್ಟಲ್ ತಂತ್ರಜ್ಞಾನದ ಸಹಾಯದಿಂದ ಪತ್ತೆ ಹಚ್ಚಲಾಗಿದೆ. ಈ ಫೋನ್​ಗಳನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಇಂದು ವಾರಸುದಾರರಿಗೆ ಹಸ್ತಾಂತರಿಸಿದರು‌.

ನಂತರ ಮಾತನಾಡಿದ ಅವರು, ಇಲ್ಲಿಯವರೆಗೆ ಮಂಗಳೂರು ನಗರದಲ್ಲಿ ಕಳೆದುಹೋದ, ಸುಲಿಗೆಯಾದ 2,133 ಮೊಬೈಲ್ ಫೋನ್​ಗಳ ಪತ್ತೆಗೆ ಸಿಐಇಆರ್ ಪೋರ್ಟಲ್ ನಲ್ಲಿ ಐಎಂಇಐ ಬ್ಲಾಕ್​ಗೆ ಕೋರಿಕೆ ಸಲ್ಲಿಕೆಯಾಗಿತ್ತು. ಇವುಗಳಲ್ಲಿ 524 ಫೋನ್​ಗಳು ಪತ್ತೆಯಾಗುವ ಮಾಹಿತಿಯಿದೆ. ಸದ್ಯ 240 ಮೊಬೈಲ್ ಫೋನ್​ಗಳು ಪತ್ತೆಯಾಗಿದ್ದು, ಈಗಾಗಲೇ 147 ಫೋನ್​ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ‌. ಇಂದು 93 ಮೊಬೈಲ್ ಫೋನ್​ಗಳನ್ನು ವಾರಸುದಾರರಿಗೆ ನೀಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಕಳೆದುಹೋದ ಮೊಬೈಲ್ ಫೋನ್​ಗಳು ದುರುಪಯೋಗವಾಗದಂತೆ ಅನ್ ಬ್ಲಾಕ್ ಮಾಡಲು CEIR ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಮೊಬೈಲ್‌ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಸ್ವತಃ ತಾವೇ ಕೆಎಸ್​ಪಿ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದು. ಬಳಿಕ (www.celr.gov.in) ಪೋರ್ಟಲ್​ನಲ್ಲಿ ಕಳೆದು ಹೋಗಿರುವ ಮೊಬೈಲ್ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೇ ಬ್ಲಾಕ್ ರಿಕ್ವೆಸ್ಟ್​ಗೆ ನೇರವಾಗಿ ಸಲ್ಲಿಸಬಹುದು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲೂ ಬ್ಲಾಕ್ ರಿಕ್ವೆಸ್ಟ್​ಗೆ ದೂರು ನೀಡಬಹುದು. ಈ ಮೂಲಕ ಪೊಲೀಸರು ಇದರ ಜಾಡು ಹಿಡಿದು ಮೊಬೈಲ್ ಫೋನ್​ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಿದ್ದಾರೆ.

ಕಳೆದು ಹೋಗಿದ್ದ ಮೊಬೈಲ್​ ಅನ್ನು ಮರಳಿ ಪಡೆದ ನವ್ಯಾ ಮಾತನಾಡಿ, 2022ರ ಡಿಸೆಂಬರ್ 18 ರಂದು ನನ್ನ ಮೊಬೈಲ್ ಕಳೆದುಹೋಗಿತ್ತು. ನಗರದ ಧಕ್ಕೆಯಲ್ಲಿ ಮೊಬೈಲ್ ಕಳೆದುಕೊಂಡಿದ್ದೆ. ಮನೆಗೆ ಹೋಗಿ ನೋಡಿದಾಗ ಮೊಬೈಲ್ ಕಳೆದುಹೋಗಿದ್ದು ಗೊತ್ತಾಗಿತ್ತು. ಆ ನಂಬರ್​ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಐದು ತಿಂಗಳ ನಂತರ ನನ್ನ ಮೊಬೈಲ್ ವಾಪಸ್​ ಸಿಕ್ಕಿದೆ. ಮಂಗಳೂರು ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು “SAY HI TO WHATSAPP" ಎಂಬ CHAT HOT ಜಾರಿಗೆ ತಂದಿದ್ದು, ಇದರಲ್ಲಿ ದೂರುದಾರರು " 8277949183 ನಂಬರಿಗೆ - HI" ಎಂದು ಮೆಸ್ಸೇಜ್ ಕಳುಹಿಸಿದ ನಂತರ ಒಂದು GOOGLE FORM ಲಿಂಕ್ ತೆರೆದುಕೊಳ್ಳುತ್ತದೆ. ಈ ಲಿಂಕ್​ ಅನ್ನು ಕ್ಲಿಕ್ ಮಾಡಿ ಅದರಲ್ಲಿ ದೂರುದಾರರು ಕಳೆದುಹೊದ ಮೊಬೈಲ್​ನ ಮಾಹಿತಿಯನ್ನು ದಾಖಲಿಸಬಹುದಾಗಿದೆ.

ಇದನ್ನೂ ಓದಿ:ಸುರತ್ಕಲ್​ನ ಎನ್​ಐಟಿಕೆಯಲ್ಲಿದೆ ಉದ್ಯೋಗಾಕಾಶ; 107 ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details