ಬಂಟ್ವಾಳ :ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ವೊಬ್ಬರು ಮೃತಪಟ್ಟ ಘಟನೆ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮೂಲತಃ ವೇಣೂರಿನ ಮರೋಡಿ ನಿವಾಸಿ ಅಬೂಬಕ್ಕರ್ (48) ಮೃತಪಟ್ಟವರು. ವಾಮದ ಪದವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದ ವೇಳೆ ನೇರಳಕಟ್ಟೆ ಬಳಿ ಎದುರಿನಿಂದ ಬಂದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದರಿಂದ ಇವರು ಕೊನೆಯುಸಿರೆಳೆದಿದ್ದಾರೆ.
ಘಟನೆಯಿಂದ ಇನ್ನೊಂದು ಬೈಕಿನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುಂಜಾಲಕಟ್ಟೆಯ ಸಹದ್ಯೋಗಿ ಸಿಬ್ಬಂದಿ ಜತೆಗೆ ವಾಮದಪದವಿನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅಬೂಬಕ್ಕರ್ ಅವರು ತನ್ನ ಬೈಕಿನಲ್ಲಿ ವಾಪಸಾಗುತ್ತಿದ್ದರು. ಉಳಿದವರು ಇಲಾಖಾ ಜೀಪಿನಲ್ಲಿ ಆಗಮಿಸುತ್ತಿದ್ದರು.
ನೇರಳಕಟ್ಟೆ ಸಮೀಪ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ಜೀಪ್ನಲ್ಲಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ತಕ್ಷಣ ಪ್ರಥಮ ಚಿಕಿತ್ಸೆಗಾಗಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.
ಆದರೆ, ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಇರಲಿಲ್ಲ. ಬಳಿಕ ಅದೇ ಜೀಪಿನಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ದುರಾದೃಷ್ಟವಶಾತ್ ಅವರು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಓದಿ:ದೇವಿ ಮೂರ್ತಿ ನಿಮಜ್ಜನ ವೇಳೆ ಅವಘಡ : ನದಿಯಲ್ಲಿ ಮುಳುಗಿ ಐವರ ದುರ್ಮರಣ