ಉಳ್ಳಾಲ(ಮಂಗಳೂರು): ಕೆಎಸ್ಆರ್ಪಿಯ ಏಳನೇ ಬೆಟಾಲಿಯನ್ನ ನೂತನ ಬ್ಯಾಚ್ನ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸೈಗೋಳಿ ಸೈಟ್ನಲ್ಲಿ ಭಾನುವಾರ ಸಂಜೆ ಬೆಳಕಿಗೆ ಬಂದಿದೆ. ಬೆಳಗಾವಿ ನಿವಾಸಿ ವಿಮಲನಾಥ ಜೈನ್ (28) ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್ಟೇಬಲ್ ಎಂದು ಗುರುತಿಸಲಾಗಿದೆ.
ತಿಂಗಳ ಹಿಂದಷ್ಟೇ ತಾಯಿ ತೀರಿಕೊಂಡ ನಂತರ ದುಃಖದಲ್ಲಿದ್ದ ಅವರು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ನೂತನ ಬ್ಯಾಚ್ ನವರಾಗಿದ್ದ ವಿಮಲನಾಥ್ ಇಂದು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ:ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಭಾನುವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುಂಪಲ ಆಶ್ರಯ ಕಾಲೋನಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯ ದಂಪತಿಯ ಹಿರಿಯ ಪುತ್ರಿ ಧನ್ಯ(17) ಮೃತ ವಿದ್ಯಾರ್ಥಿನಿ. ಧನ್ಯ ನಗರದ ರಾಮಕೃಷ್ಣ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.
ಫೆ.14 ರಂದು ಮಧ್ಯಾಹ್ನ ತಾಯಿ ಭವ್ಯ ಮನೆಗೆ ಬಂದಾಗ ಕಾಲೇಜಿಗೆ ರಜೆಯಲ್ಲಿದ್ದ ಧನ್ಯ ಮನೆಯಲ್ಲಿರಲಿಲ್ಲ ಎಂದು ಹೇಳಲಾಗುತ್ತಿದೆ. ಮದ್ಯಾಹ್ನ 3 ಗಂಟೆಗೆ ಧನ್ಯ ಮನೆಗೆ ಮರಳಿದ್ದು ಈ ವೇಳೆ ತಾಯಿ, ಧನ್ಯಳನ್ನು ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದ್ದು ಗೆಳತಿ ಮನೆಗೆ ಓದಲು ತೆರಳಿದ್ದಾಗಿ ಹೇಳಿದ್ದಾಳೆ. ಗೆಳತಿ ಮನೆಗೆ ಹೋಗುವಾಗ ಫೋನ್ ಕರೆ ಏಕೆ ಮಾಡಿಲ್ಲ ಎಂದು ತಾಯಿ ಗದರಿದ್ದರು ಎನ್ನಾಲಾಗಿದೆ. ಬಳಿಕ ತಾಯಿ ಸಮೀಪದ ಮನೆಗೆ ತೆರಳಿದ್ದಾಗ, ಧನ್ಯ ಮನೆಯೊಳಗಿದ್ದ ಗೆದ್ದಲಿಗೆ ಹೊಡೆಯುವ ಕೀಟನಾಶಕ ಸೇವಿಸಿ ತೀವ್ರ ಅಸ್ವಸ್ಥಗೊಂಡದ್ದಳು. ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದ್ದಾಳೆ.