ಮಂಗಳೂರು:ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸೇರಿದಂತೆ ಎಲ್ಲ ಮೂಲಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಹೇಳಿದ್ದಾರೆ.
ಕಿಶೋರ್ ಶೆಟ್ಟಿ ಡ್ರಗ್ ಡೀಲಿಂಗ್ ಸಂಬಂಧ ಮಾತನಾಡಿದ ಪೊಲೀಸ್ ಕಮಿಷನರ್ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗಿರುವ ಲಿಂಕ್ ಬಗ್ಗೆ ಕೆಲವೊಂದು ಸುದ್ದಿಗಳು ಪ್ರಸಾರವಾಗಿವೆ. ಅದನ್ನು ಪರಿಗಣನೆಗೆ ತೆಗೆದಕೊಂಡು ಎಲ್ಲ ಮೂಲಗಳಿಂದಲೂ ತನಿಖೆ ನಡೆಸಲಾಗುವುದು ಎಂದರು.
ವಿಚಾರಣೆ ವೇಳೆ ಕಿಶೋರ್ ಶೆಟ್ಟಿ ನೀಡಿದ ಮಾಹಿತಿಯಂತೆ ಮಣಿಪುರದ ಅಸ್ಕಾ ಎಂಬ ಓರ್ವ ಯುವತಿಯನ್ನು ಡ್ರಗ್ಸ್ ಸೇವನೆ ಬಗ್ಗೆ ಪರೀಕ್ಷೆ ನಡೆಸಿದಾಗ ಆಕೆಗೆ ಪಾಸಿಟಿವ್ ಬಂದಿದ್ದು, ಆಕೆ ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ. ಆಕೆಯನ್ನು ಬಂಧಿಸಲಾಗಿದ್ದು, ಇಂದು ಆಕೆಯನ್ನು ವಿಚಾರಣೆ ನಡೆಸಲಾಗುವುದು ಎಂದರು.
ಬಂಧಿತ ಕಿಶೋರ್ ಶೆಟ್ಟಿ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ಬಂದಿದೆ. ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತನಿಗಿರುವ ಲಿಂಕ್ಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.