ಮಂಗಳೂರು:ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ವಕೀಲ ಕೆ.ಎಸ್.ಎನ್ ರಾಜೇಶ್ ಭಟ್ ಅವರನ್ನು ರಕ್ಷಿಸುವ ಕಾರ್ಯವನ್ನು ಸಾಕಷ್ಟು ಮಂದಿ ಮಾಡುತ್ತಿದ್ದಾರೆ. ಅಂಥವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಎಚ್ಚರಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಮಾತನಾಡಿದರು ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಯನ್ನು ಪತ್ತೆ ಮಾಡುವ ಪ್ರಾಮಾಣಿಕ ಹಾಗೂ ಗಂಭೀರ ಪ್ರಯತ್ನವನ್ನು ನಮ್ಮ ಪೊಲೀಸ್ ಸಿಬ್ಬಂದಿ ಮಾಡುತ್ತಿದ್ದಾರೆ. ಅಷ್ಟಾಗಿಯೂ ಇನ್ನೂ ಆರೋಪಿಯನ್ನು ಬಂಧಿಸುವ ಕಾರ್ಯ ಆಗಿಲ್ಲ ಎಂದು ತಿಳಿಸಿದರು.
ಲೋಕಾಯುಕ್ತ ಹಾಗೂ ಎಸಿಬಿಗೆ ವಕೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎಸ್.ಎನ್.ರಾಜೇಶ್ ಭಟ್ ಅವರು ಬೇರೆ ಬೇರೆ ಸಂಸ್ಥೆಗಳಿಗೂ ಕಾನೂನು ಸಲಹೆ ನೀಡುತ್ತಿದ್ದರು. ಹಾಗಾಗಿ, ಸಾಕಷ್ಟು ವಕೀಲರೊಂದಿಗೆ ಸಂಪರ್ಕದಲ್ಲಿದ್ದರು. ಆದ್ದರಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮೂಲದ ವಕೀಲರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆಂದು ಗಮನಕ್ಕೆ ಬಂದಿದೆ ಎಂದರು.
ಘಟನೆ ನಡೆದು ಸಂತ್ರಸ್ತೆ ದೂರು ದಾಖಲಿಸಲು ಸಮಯ ತೆಗೆದುಕೊಂಡಿದ್ದರಿಂದ ಎಫ್ಐಆರ್ ದಾಖಲಿಸಲು ಸಮಯ ತೆಗೆದುಕೊಂಡಿತ್ತು. ಆ ಸಂದರ್ಭದಲ್ಲಿ ದೂರು ದಾಖಲಾದರೆ ಏನೆಲ್ಲಾ ಮಾಡಬೇಕೆಂಬ ಕುರಿತು ಅವರು ಮುಂಜಾಗ್ರತೆ ವಹಿಸಿದ್ದಾರೆ. ಈ ಪ್ರಕರಣದಲ್ಲಿ ಯಾರೆಲ್ಲ ಆರೋಪಿಗೆ ಸಹಕರಿಸಿದ್ದಾರೋ ಅವರ ಬಗೆಗಿನ ಮಾಹಿತಿಯನ್ನು ತನಿಖೆಯಲ್ಲಿ ಪತ್ತೆ ಹಚ್ಚಿದ್ದೇವೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಾಕ್ಷ್ಯ ನಾಶಕ್ಕೆ ಹಾಗು ಆರೋಪಿ ಬಚ್ಚಿಡಲು ಸಹಕರಿಸಿದವರನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಪ್ರಕರಣದಿಂದ ಆರೋಪಿಯನ್ನು ಪಾರು ಮಾಡಲು ನಾಲ್ಕೈದು ಮಂದಿ ವಕೀಲರು ಹಣ ಸಂಗ್ರಹಿಸಿ ಆತನಿಗೆ ಬೇಲ್ ಸಿಗುವಂತೆ ಪ್ರಯತ್ನ ಪಡುತ್ತೇವೆ. ಅಲ್ಲಿಯವರೆಗೆ ಅವರು ಪೊಲೀಸರ ಕೈಗೆ ಸಿಗದಂತೆ ಬಚ್ಚಿಡುತ್ತೇವೆ. ಜಡ್ಜ್ ಗಳನ್ನೇ ಆತನ ಬೇಲ್ಗಾಗಿ ಹಣ ನೀಡಿ ಖರೀದಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಸಂತ್ರಸ್ತೆಯ ಕಡೆಯವರಿಂದ ದೂರುಗಳು ಕೇಳಿ ಬಂದಿವೆ.
ಆದರೆ, ಅದು ಸಾಧ್ಯವಿಲ್ಲ. ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಲೈಂಗಿಕ ಕಿರುಕುಳದ ಆರೋಪಿಗಳನ್ನು ಬಂಧಿಸುವುದೇ ನಮ್ಮ ಉದ್ದೇಶವಾಗಿದ್ದು, ಯಾವುದೇ ಕಾರಣಕ್ಕೂ ಆರೋಪಿಯನ್ನು ಕಾನೂನಿನ ಕೈಯಿಂದ ತಪ್ಪಿಸಲು ಬಿಡುವುದಿಲ್ಲ ಎಂದು ಅವರು ಖಡಕ್ ಆಗಿ ಹೇಳಿದರು.
ಓದಿ:ಕಲ್ಯಾಣ ಮಂಟಪಕ್ಕೆ ನುಗ್ಗಿ ವಧುವಿನ ₹20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಕಳ್ಳ ಪರಾರಿ