ಮಂಗಳೂರು: ಅನುಶ್ರೀ ವಿರುದ್ಧ ತಾನು ಹೇಳಿಕೆ ನೀಡಿಲ್ಲ ಎಂದು ಆರೋಪಿ ಕಿಶೋರ್ ಅಮನ್ ಶೆಟ್ಟಿ ಮಾಧ್ಯಮದ ಮುಂದೆ ಹೇಳುವುದಲ್ಲ, ಅದನ್ನು ನ್ಯಾಯಾಲಯದ ಮುಂದೆ ಹೇಳಲಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹೇಳಿದ್ದಾರೆ.
ಪೊಲೀಸ್ ಕಮಿಷನರ್ ಪ್ರತಿಕ್ರಿಯೆ ಚಾರ್ಜ್ ಶೀಟ್ ಬಗ್ಗೆ ಆರೋಪಗಳಿದ್ದಲ್ಲಿ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಬಹುದು. ಚಾರ್ಜ್ಶೀಟ್ನಲ್ಲಿ ಅನುಶ್ರೀ ಆರೋಪಿ ಎಂದು ಎಲ್ಲೂ ಉಲ್ಲೇಖವಾಗಿಲ್ಲ. ಕೇವಲ ಕಿಶೋರ್ ಶೆಟ್ಟಿ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ. ಕಿಶೋರ್ ಅಮನ್ ಮತ್ತೆ ಕರೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ನಾವು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದೇವೆ ಎಂದರು.
ಇದನ್ನೂ ಓದಿ:ಚಾರ್ಜ್ಶೀಟ್ನಲ್ಲಿರುವುದೆಲ್ಲ ಸಂಪೂರ್ಣ ಸುಳ್ಳು, ಅನುಶ್ರೀ ವಿರುದ್ಧ ಹೇಳಿಕೆ ನೀಡಿಲ್ಲ : ಡ್ಯಾನ್ಸರ್ ಕಿಶೋರ್ ಶೆಟ್ಟಿ
ನಾನು ಮಂಗಳೂರು ಪೊಲೀಸ್ ಆಯುಕ್ತನಾಗಿ ಅಧಿಕಾರ ಸ್ವೀಕರಿಸಿ ಎಂಟು ತಿಂಗಳಾಗಿದ್ದು, ಒಂಬತ್ತು ತಿಂಗಳ ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈಗ ಮತ್ತೆ ಯಾಕೆ ಇದು ಸುದ್ದಿಯಾಗಿದೆ ಎಂಬುದು ತಿಳಿಯುತ್ತಿಲ್ಲ. ಅನುಶ್ರೀ ಮೇಲಿರುವ ಆರೋಪಕ್ಕೆ ಪೂರಕ ಸಾಕ್ಷಿ ಲಭ್ಯವಾಗಿಲ್ಲ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಇದನ್ನೂ ಓದಿ:"ಅನುಶ್ರೀ ಜೊತೆಗೆ ಮಾದಕ ವಸ್ತು ಸೇವನೆ ಮಾಡಿದ್ದೇವೆ": ಚಾರ್ಜ್ಶೀಟ್ನಲ್ಲಿ ಡ್ಯಾನ್ಸರ್ ಕಿಶೋರ್ ಹೇಳಿಕೆ ದಾಖಲು
2020 ಸೆ.19ರಂದು ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಮಂಗಳೂರಿನ ಎಕಾನಾಮಿಕ್ ನಾರ್ಕೊಟಿಕ್ ಮತ್ತು ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆದು 2020ರ ಡಿಸೆಂಬರ್ 11ರಂದು ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅಂತಿಮ ವರದಿಯಲ್ಲಿ ಆರು ಜನರ ಹೆಸರು ಉಲ್ಲೇಖಿಸಲಾಗಿದೆ. ಈ ಆರು ಮಂದಿಯಲ್ಲಿ ಐದು ಮಂದಿಗೆ ಬೇಲ್ ದೊರಕಿದ್ದು, ಓರ್ವ ಮಾತ್ರ ಇನ್ನೂ ಜೈಲಿನಲ್ಲಿದ್ದಾನೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು.