ಬಂಟ್ವಾಳ:ಗಾಂಜಾದಿಂದ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣೆಯ ಪೊಲೀಸ್ ತಂಡದವರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಉಕ್ಕುಡ ನಿವಾಸಿ ಅಬ್ದುಲ್ ಖಾದರ್ ಯಾನೆ ಅದ್ದು (25) ಬಂಧಿತ ಆರೋಪಿ. ಈತ ಗಾಂಜಾದಿಂದ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದನು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಸುಮಾರು 300 ಗ್ರಾಂ ತೂಕದ ಗಾಂಜಾ ಎಣ್ಣೆ, 40 ಗ್ರಾಂ ಮೊಗ್ಗು ಕಾಯಿ ಮಿಶ್ರಿತ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ್ ನಿರ್ದೇಶನದಂತೆ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ಎಸ್.ಕೆ., ಬಂಟ್ವಾಳ ಸಂಚಾರಿ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ.ವಿ., ವಿಟ್ಲ ಪ್ರೊಬೆಷನರಿ ಉಪನಿರೀಕ್ಷಕ ಕೃಷ್ಣಕಾಂತ್, ಸಿಬ್ಬಂದಿಗಳಾದ ಗೋಣಿಬಸಪ್ಪ, ಕುಮಾರ್, ವಿವೇಕ್, ವಿಟ್ಲ ಸಿಬ್ಬಂದಿಗಳಾದ ಕೆ.ಟಿ. ಜಯರಾಮ, ಪ್ರಸನ್ನ, ಲೋಕೇಶ್, ಪ್ರತಾಪ, ವಿನಾಯಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.