ಮಂಗಳೂರು:ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಯುವಕರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ಸಾಗಟ: ಇಬ್ಬರು ಆರೋಪಿಗಳ ಬಂಧನ - undefined
ತಣ್ಣೀರು ಬಾವಿ ರಸ್ತೆಯಲ್ಲಿರುವ ಐಒಸಿಎಲ್ ಬಳಿ ಕಾರೊಂದರಲ್ಲಿ ಅಕ್ರಮವಾಗಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪ್ರಕರಣ ದಾಖಲಾಗಿದೆ.
ಜಪ್ಪಿನಮೊಗರು ತಂದೊಳಿಗೆ ನಿವಾಸಿ ನಿಹಾಲ್ ಎಡ್ವಿನ್ ಮುತ್ತು, ಬೆಂದೂರ್‌ವೆಲ್ ನಿವಾಸಿ ತ್ರಿಶೂಲ್ ಬಂಧಿತ ಆರೋಪಿಗಳು. ತಣ್ಣೀರು ಬಾವಿ ರಸ್ತೆಯಲ್ಲಿರುವ ಐಒಸಿಎಲ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದು ಈ ಆರೋಪಿಗಳು ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಇದನ್ನು ಬೆನ್ನತ್ತಿದ ಪೊಲೀಸರು ಕಾರಿನ ಸಹಿತ ಅದರಲ್ಲಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಾಂಜಾ ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ.
ಬಂಧಿತ ಆರೋಪಿಗಳಿಂದ 2 ಸಾವಿರ ರೂ. ಮೌಲ್ಯದ 20 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಲಾದ ಹುಂಡೈ ಕಾರು, 2 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ 5.17 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪ್ರಕರಣ ದಾಖಲಾಗಿದೆ.