ಮಂಗಳೂರು:ನಗರ ಹಾಗೂ ಕೇರಳ ರಾಜ್ಯಕ್ಕೆ ಮಾದಕ ವಸ್ತು ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಕುಖ್ಯಾತ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲದ ಹಸನ್ ಸಾದಿಕ್ ಯಾನೆ ಬ್ಲೇಡ್ ಸಾದಿಕ್(35) ಬಂಧಿತ ಆರೋಪಿ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಈತ ಬೆಂಗಳೂರಿನಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿಕೊಂಡು ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಒಟ್ಟು 50ಗ್ರಾಂ ತೂಕದ 2,50,000 ರೂ ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕಾರು, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,65,500 ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಜಾಲದ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಹಸನ್ ಸಾದಿಕ್ ಯಾನೆ ಬ್ಲೇಡ್ ಸಾದಿಕ್ ಎಂಬಾತನ ವಿರುದ್ಧ ಈ ಹಿಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಹಲ್ಲೆ, ಬೆದರಿಕೆ ಪ್ರಕರಣಗಳು, 4 ಕೊಲೆ ಯತ್ನ ಪ್ರಕರಣ, ಪುತ್ತೂರು ನಗರ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ, ಉಪ್ಪಿನಂಗಡಿ ಠಾಣೆಯಲ್ಲಿ ಮಾನಭಂಗ ಹಾಗೂ ಕಿಡ್ನಾಪ್ ಪ್ರಕರಣ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಹಲ್ಲೆ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ, ಬೆಂಗಳೂರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಹೀಗೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಈತ ಸುಮಾರು 6 ತಿಂಗಳಿನಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ವಾರೆಂಟ್ ಹೊರಡಿಸಿದೆ.
ಆರೋಪಿ ಮತ್ತು ಮಾದಕ ವಸ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ರಾಜೇಂದ್ರ ಬಿ, ನರೇಂದ್ರ, ಶರಣಪ್ಪ ಭಂಡಾರಿ, ಸುದೀಪ್ ಎಂ ವಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
ರಫೀಕ್ ಯಾನೆ ಮುಡಿಪು ರಫೀಕ್, ಅಬ್ದುಲ್ ರಾಝೀಕ್ ನ್ಯಾಯಾಲಯಕ್ಕೆ ವಿಚಾರಣೆಯಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ:ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಮತ್ತು ಮತ್ತೊರ್ವ ಆರೋಪಿಯನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಬಾಳೆಪುಣಿಯ ಮುಡಿಪು ಚರ್ಚ್ ಬಳಿಯ ನಿವಾಸಿ ಮೊಹಮ್ಮದ್ ರಫೀಕ್ ಯಾನೆ ಮುಡಿಪು ರಫೀಕ್, ಮಂಗಳೂರಿನ ಮನ್ನೂರು ಗ್ರಾಮದ ಮದನಿನಗರದ ಅಬ್ದುಲ್ ರಾಝೀಕ್ ಬಂಧಿತರು.
ಇದನ್ನೂ ಓದಿ:ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳದ ನಾಲ್ವರು ಆರೋಪಿಗಳು ಅರೆಸ್ಟ್