ದಕ್ಷಿಣ ಕನ್ನಡ (ಸುಳ್ಯ): ಸುಳ್ಯದ ಜ್ಯೋತಿ ಸರ್ಕಲ್ ಬಳಿ ಜೂನ್ 6ರ ರಾತ್ರಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ತಂಡ ಸುಳ್ಯ ಜಯನಗರ ನಿವಾಸಿ ಮಹಮ್ಮದ್ ಶಾಹಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಈ ಪ್ರಕರಣವನ್ನು ಭೇಧಿಸಿರುವ ಪೊಲೀಸರು 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೊಡಗು ಕುಶಾಲನಗರದ ಕೆ ಜಯನ್ (38), ಮಡಿಕೇರಿಯ ವಿನೋದ್ (34), ಮನೋಜ್ (25) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ನಾಡ ಪಿಸ್ತೂಲು ಮತ್ತು ಎರಡು ಸಜೀವ ತೋಟೆಗಳನ್ನು ಹಾಗೂ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಕೆಲವೊಂದು ವಿಚಾರದಲ್ಲಿ ಉಂಟಾದ ವೈಷಮ್ಯದಿಂದ ಈ ದಾಳಿ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಜಯನ್ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.