ಕರ್ನಾಟಕ

karnataka

ETV Bharat / state

ಪಿಎಂ ಕೇರ್ಸ್ ಹಣದ ಲೆಕ್ಕ ಕೊಡದೇ ಬಚ್ಚಿಡುವ ಕೆಲಸ ನಡೆಯುತ್ತಿದೆ: ಹರೀಶ್ ಕುಮಾರ್ ಆರೋಪ

ಕೊರೊನಾ ತಂದೊಡ್ಡಿದ ಸಂಕಷ್ಟ ನಿವಾರಣೆಗೆ, ಸರ್ಕಾರಕ್ಕೆ ಸಹಕರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪಿಎಂ ಕೇರ್ಸ್​ ಫಂಡ್​ಗೆ ಹಣ ನೀಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಹಣ ದುರ್ಬಳಕೆ ಮಾಡಿಕೊಂಡಿದ್ದು, ಈ ಹಣದ ಲೆಕ್ಕ ಕೊಡಲು ಹಿಂಜರಿಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದಾರೆ.

Harish Kumar
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸುದ್ದಿಗೋಷ್ಠಿ

By

Published : Aug 19, 2020, 2:30 PM IST

ಮಂಗಳೂರು:ಕೊರೊನಾ ಸಂಕಷ್ಟ ನಿವಾರಣೆಗೆ ಎಂದು ಸಾರ್ವಜನಿಕರಿಂದ ಪಿಎಂ ಕೇರ್ಸ್ ಫಂಡ್​​​ಗೆ ಹಣ ಸಂಗ್ರಹವಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳುತ್ತಿದೆ. ಹಾಗಾದಲ್ಲಿ ಆ ಹಣ ಎಲ್ಲಿಗೆ ಹೋಗಿದೆ?, ಸ್ವಜನ ಹಿತಾಸಕ್ತಿಗೆ ಖರ್ಚಾಗುತ್ತಿದೆಯೇ? ಎನ್ನುವುದನ್ನು ಪ್ರಧಾನಮಂತ್ರಿ ಕಾರ್ಯಾಲಯ ಸ್ಪಷ್ಟಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಅವ್ಯವಹಾರ ಅಥವಾ ಕೋವಿಡೇತರ ಹಾಗೂ ಇನ್ನಿತರ ಕಾರ್ಯಗಳಿಗೆ ಆ ಹಣ ಬಳಕೆಯಾದಲ್ಲಿ ಮಾತ್ರ ಲೆಕ್ಕ ಕೊಡಲು ಹಿಂಜರಿಯ ಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅದರ ಲೆಕ್ಕ ಬಹಿರಂಗ ಪಡಿಸಲು ತೊಂದರೆ ಏನು? ಪಿಎಂ ಕೇರ್ಸ್ ಹಣ ಸಾರ್ವಜನಿಕರ ಸೊತ್ತು ಆದ್ದರಿಂದ ಅದನ್ನು ಬಚ್ಚಿಡುವಂತಹ ಕೆಲಸ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸುದ್ದಿಗೋಷ್ಠಿ

ಪ್ರಧಾನಮಂತ್ರಿ ಮೋದಿಯವರು ರೈತರಿಗೆ ಒಂದು ಲಕ್ಷ ಕೋಟಿ ರೂ. ಪರಿಹಾರ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಅದು 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​​​​​ನ ಒಂದು ಭಾಗ. ಆದರೆ, ಮತ್ತೆ ಇವತ್ತು ಹೊಸ ಕೊಡುಗೆ ಕೊಟ್ಟ ರೀತಿಯಲ್ಲಿ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇಂದಿಗೂ ರೈತ ಬೆಳಗ್ಗೆ 4 ಗಂಟೆಗೆ ಬಂದು ರಸಗೊಬ್ಬರಗಳಿಗೆ ಸಾಲು ನಿಲ್ಲುತ್ತಿದ್ದಾರೆ. ಬಿತ್ತನೆ ಸಮಯ, ಒಳ್ಳೆಯ ಬೆಳೆ ಬಂದಿದೆ‌. ಆದರೆ, ಈ ಸಂದರ್ಭದಲ್ಲಿ ಸರಿಯಾದ ರಸಗೊಬ್ಬರ ಸಿಗದೇ ರೈತರು ಕಂಗಾಲಾಗಿದ್ದಾರೆ. ಪ್ರಧಾನಮಂತ್ರಿ ರೈತರಿಗೆ ಘೋಷಣೆ ಮಾಡಿರುವ ಒಂದು ಲಕ್ಷ ಕೋಟಿ ರೂ. ಎಲ್ಲಿಗೆ ಹೋಗಿದೆ ಎಂದು ತಿಳಿಸಲಿ ಎಂದು ಆಗ್ರಹಿಸಿದರು.

ಬೆಂಗಳೂರು ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಮನೆ ಸುಟ್ಟುಹಾಕಲಾಯಿತು. ಇದು ರಾಜ್ಯದ ಕಾನೂನು ಸುವ್ಯವಸ್ಥೆ ಲೋಪ ಎತ್ತಿ ತೋರಿಸುತ್ತಿದೆ. ಸರ್ಕಾರದ ಗುಪ್ತಚರ ದಳ ಕೆಲಸ ಮಾಡುತ್ತಿಲ್ಲ ಎಂಬುದು ಈ ಘಟನೆಯ ಮೂಲಕ ಸಾಬೀತಾಗಿದೆ. ನವೀನ್ ಎಂಬಾತ ಪೋಸ್ಟ್ ಮಾಡಿರುವ ವಿಷಯ ವೈರಲ್ ಆಗಿರುವ ಬಗ್ಗೆ ಪೊಲೀಸರಿಗೆ ಸಂಪೂರ್ಣ ಮಾಹಿತಿ ಇತ್ತು.‌ ಬೆಳಗ್ಗೆಯಿಂದ ಸಂಜೆಯವರೆಗೆ ಈ ಪೋಸ್ಟ್ ವೈರಲ್ ಆಗಿತ್ತು. ಸಂಜೆ ಗಲಭೆಯಾಗುವ ಲಕ್ಷಣಗಳೂ ಪೊಲೀಸರಿಗೆ ಗೋಚರಿಸಿತ್ತು, ಆದರೆ ಈ ಬಗ್ಗೆ ಯಾವುದೇ ಭದ್ರತೆ ಹಾಗೂ ಮುಂಜಾಗ್ರತೆ ಕೈಗೊಳ್ಳಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಹರೀಶ್​ ಕುಮಾರ್​​ ಹರಿಹಾಯ್ದಿದ್ದಾರೆ.

ಶಾಸಕರಿಗೆ ಇಲ್ಲದ ಭದ್ರತೆ ಸಾರ್ವಜನಿಕರಿಗೆ ಲಭ್ಯವಾಗಬಹುದೇ?. ಹಿಂದೆ ಮೈಸೂರು ಶಾಸಕ ತನ್ವಿರ್ ಸೇಠ್ ಮೇಲೆ ಕೊಲೆಯತ್ನ ನಡೆಯಿತು. ಈಗ ಶಾಸಕ ಅಖಂಡ ಶ್ರೀನಿವಾಸ್ ಅವರ ಕೊಲೆಯತ್ನ ನಡೆದಿದೆ. ಯಾಕೆ ಈ ವಿಷಯಗಳು ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿಲ್ಲ, ಸರ್ಕಾರ ಈ ಬಗ್ಗೆ ಯಾಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ದುಷ್ಕರ್ಮಿಗಳ ಬಗ್ಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಇದನ್ನು ಸರಿಯಾಗಿ ನಿಭಾಯಿಸದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹರೀಶ್ ಕುಮಾರ್ ಆರೋಪಿಸಿದ್ದಾರೆ.

ABOUT THE AUTHOR

...view details