ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಸಿಡ್ನಿಯ ಇಂಡಿಯನ್ ಆಸ್ಟ್ರೇಲಿಯನ್ ಡಯಾಸ್ಪೊರ ಫೌಂಡೇಶನ್ (IADF) ಭರದಿಂದ ಸಿದ್ಧತೆ ನಡೆಸಿಕೊಂಡಿದೆ. 20,000ಕ್ಕೂ ಅಧಿಕ ಜನರು ವೀಕ್ಷಸಲಿರುವ ಈ ಕಾರ್ಯಕ್ರಮಕ್ಕೆ ಮೋದಿ ಆಗಮಿಸಲಿದ್ದು, ಅವರಿಗೆ ನೃತ್ಯದ ಮೂಲಕ ಸ್ವಾಗತ ಕೋರುವ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಧುಷಿ ಪಲ್ಲವಿ ಭಾಗವತ್ ಅವರು ತಮ್ಮ ನೃತ್ಯ ಸಂಸ್ಥೆ ನಾಟ್ಯೋಕ್ತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲ್ಲಿದ್ದಾರೆ. ಅವರ ತಂಡದಲ್ಲಿ ಮಂಗಳೂರಿನ ಅನಿಶಾ ಪೂಜಾರಿ ಅವರು ಪಾಲ್ಗೊಳ್ಳಲಿದ್ದಾರೆ.
ಅವರು ಕಾಂತಾರ ಸಿನಿಮಾದ ಹಾಡುಗಳ ಮೂಲಕ ಮನರಂಜಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ಹಳ್ಳಿಯ ಸೊಬಗನ್ನು ತೋರಿಸುವ ಜಾನಪದ ನೃತ್ಯ ಹಾಗೂ ಯಕ್ಷಗಾನದ ಸೊಬಗನ್ನು ಅಳವಡಿಸಿದ ಈ ನೃತ್ಯದಲ್ಲಿ ಉಡುಪಿ, ಮಂಗಳೂರು ಸೇರಿದಂತೆ ದೇಶ ಹಾಗೂ ಅಂತಾರಾಷ್ಟ್ರೀಯ ಕಲಾವಿದರ ತಂಡ ಪಾಲ್ಗೊಳ್ಳಲಿದೆ. ಶ್ರೀ ನಾಟ್ಯನಿಲಯಮ ಮಂಜೆಶ್ವರ್ ಹಾಗೂ ಕರ್ನಾಟಕ ಕಲಾಶ್ರೀ ವಿಧುಷಿ ಕಮಲಾ ಭಟ್ ಬಳಿ ತಮ್ಮ ಭರತನಾಟ್ಯ ವಿಧ್ವತ್ ಪೂರೈಸಿದ ಪಲ್ಲವಿ ಅವರು ಐಟಿಯಲ್ಲಿ ಕಾರ್ಯ ನಿರ್ವಹಿಸುತ್ತಾ ತಮ್ಮ ಭರತನಾಟ್ಯ ಸಂಸ್ಥೆಯನ್ನ ಹಲವು ವರ್ಷಗಳಿಂದ ಸಿಡ್ನಿಯಲ್ಲಿ ನಡೆಸುತ್ತಿದ್ದಾರೆ.
ಮೇ. 23ರಂದು ಪ್ರಧಾನಿ ಮೋದಿಯವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರೊಂದಿಗೆ ಸಿಡ್ನಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಲ್ಲವಿ ಅವರು ನಾಟ್ಯ ಪ್ರದರ್ಶನ ಮಾಡಲಿದ್ದಾರೆ. ಇದರಲ್ಲಿ ಮಂಗಳೂರು ಮೂಲದ ಬಿಜೈ ಮೂಲದ ಯುವತಿ ಅನೀಶಾ ಪೂಜಾರಿ ಅವರನ್ನು ಒಳಗೊಂಡ ನೃತ್ಯ ತಂಡವು ಈ ನೃತ್ಯ ಪ್ರದರ್ಶನ ಮಾಡಲಿದೆ.