ಮಂಗಳೂರು:ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು ಸದ್ಯದ ಅನಿವಾರ್ಯತೆಯಾಗಿದೆ. ಇದೀಗ ಅದೇ ಪರಿಕಲ್ಪನೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಪ್ರಯತ್ನಗಳು ಆಗುತ್ತಿವೆ. ಈ ನಡುವೆ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಅದಕ್ಕೊಂದು ವ್ಯವಸ್ಥೆ ಕಲ್ಪಿಸಲಾಗಿದೆ.
ಆದರೆ ಮಹಿಳೆಯರು ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್ಕಿನ್ಗಳ ವಿಲೇವಾರಿ ಸದ್ಯದ ತಲೆನೋವಾಗಿತ್ತು. ಆದರೆ, ಇದೀಗ ಸರ್ಕಾರದ ನಿರ್ದೇಶನದಂತೆ ಸ್ಯಾನಿಟರಿ ನ್ಯಾಪ್ ಕಿನ್ಗಳನ್ನು ಸೂಕ್ತ ವಿಲೇವಾರಿಗೆ ಇನ್ಸಿನರೇಟರ್ ಯಂತ್ರವನ್ನು ಬಳಕೆ ಮಾಡಲಾಗುತ್ತದೆ.
ಉಪಯೋಗಿಸಿ ಬಿಸಾಡುವ ನ್ಯಾಪ್ಕಿನ್ಗಳನ್ನು ಸಂಗ್ರಹಿಸುವ ಸಲುವಾಗಿ ಋತು ಎಂಬ ಶೀರ್ಷಿಕೆಯಡಿ ಪಿಂಕ್ ಬಾಕ್ಸ್ ಪರಿಕಲ್ಪನೆಯನ್ನು ಕಿಲ್ಪಾಡಿ ಗ್ರಾ.ಪಂನಲ್ಲಿ ಜಾರಿಗೆ ತರಲಾಗಿದೆ. ಗ್ರಾ.ಪಂ ಕಚೇರಿ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಪ್ರತೀ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೊಂದರಂತೆ ಗುಲಾಬಿ ಬಣ್ಣದ ಡಸ್ಟ್ ಬಿನ್ಗಳನ್ನು ಇಡಲಾಗುತ್ತದೆ. ಇದನ್ನು ಮಕ್ಕಳ ಕೈಗೆ ಸಿಗದಷ್ಟು ಎತ್ತರದಲ್ಲಿಟ್ಟು ಕೇವಲ ಮಹಿಳೆಯರು ಪ್ರವೇಶಿಸುವಂತಹ ಕೋಣೆಗಳಲ್ಲಿ ಅಳವಡಿಸಲಾಗುತ್ತದೆ.
ವಿದ್ಯಾರ್ಥಿನಿಯರು ಹಾಗೂ ಗ್ರಾಮದ ಮಹಿಳೆಯರು ತಾವು ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಎಲ್ಲೆಂದರಲ್ಲಿ ಎಸೆಯದೇ ಪೇಪರ್ನಲ್ಲಿ ಸುತ್ತಿ ಆ ಗುಲಾಬಿ ಬಾಕ್ಸ್ನಲ್ಲಿ ಹಾಕಬಹುದು. ದಿನಕ್ಕೊಮ್ಮೆ ಪ್ರತಿ ಕೇಂದ್ರಕ್ಕೂ ಭೇಟಿ ನೀಡುವ ಗ್ರಾ.ಪಂ ಸಿಬ್ಬಂದಿ ಅದನ್ನು ಸೂಕ್ತ ಮುಂಜಾಗ್ರತೆಯೊಂದಿಗೆ ಸಂಗ್ರಹಿಸಿ ಇನ್ಸಿನರೇಟರ್ ಯಂತ್ರದ ಮೂಲಕ ಸೂಕ್ತವಾಗಿ ವಿಲೇವಾರಿ ಮಾಡುತ್ತಾರೆ.
ಇನ್ಸಿನರೇಟರ್ ಯಂತ್ರವು ಸುಮಾರು 900 ಸೆಲ್ಸಿಯಸ್ ಉಷ್ಣಾಂಶದಲ್ಲಿ ಉರಿಯುತ್ತದೆ. ಈ ಮೂಲಕ ಅದು ಕೇವಲ ಒಂದು ಬಾರಿಗೆ 20 ನಿಮಿಷಗಳಲ್ಲಿ 50 ರಿಂದ 60 ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸುಟ್ಟು ಬೂದಿ ಮಾಡುತ್ತದೆ. ಅಷ್ಟೊಂದು ಪ್ರಮಾಣದ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸುಡುವ ಸಂದರ್ಭದಲ್ಲಿಯೂ ಅದರಿಂದ ಕೇವಲ ಅಲ್ಪ ಪ್ರಮಾಣದ ಹೊಗೆ ಮಾತ್ರ ಹೊರಬರುತ್ತದೆ.
ಅಲ್ಲದೇ ಇದು ಮನುಷ್ಯನ ಆರೋಗ್ಯದ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಉಂಟು ಮಾಡದಿಲ್ಲ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಅದೇ ರೀತಿ ಏಕಕಾಲಕ್ಕೆ 60 ಪ್ಯಾಡ್ಗಳನ್ನು ಸುಡುವ ಸಂದರ್ಭದಲ್ಲಿಯೂ ಗರಿಷ್ಠ ಶೇಕಡಾ 1ರಷ್ಟು ಮಾತ್ರ ಬೂದಿ ಉಳಿಯುತ್ತದೆ ಅದನ್ನು ಬಚ್ಚಲು ಗುಂಡಿಗೆ ಹಾಕಿಬಿಡಬಹುದು. ಇದುವರೆಗೂ ಸ್ವಸ್ಥ ಸಮಾಜಕ್ಕೆ ಸವಾಲಾಗಿ, ಬಳಸಿ ಅಲ್ಲಲ್ಲಿ ಎಸೆಯುತ್ತಿದ್ದ ಸ್ಯಾನಿಟರಿ ನ್ಯಾಪ್ಕಿನ್ಳಿಂದ ಪರಿಸರಕ್ಕೆ ಹಾಗೂ ಮನುಕುಲಕ್ಕೆ ಉಂಟಾಗಬಹುದಾದ ಹಾನಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ.