ಮಂಗಳೂರು (ದ.ಕ): ಲಾಕ್ಡೌನ್ನಿಂದ ಸಂಪೂರ್ಣ ಸ್ಥಗಿತಗೊಂಡಿರುವ ನಗರದ ವಾಮಂಜೂರಿನಲ್ಲಿರುವ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಜೂ.10ರಿಂದ ಪ್ರವಾಸಿಗರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ ಎಂದು ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.10ರಿಂದ ಪಿಲಿಕುಳ ನಿಸರ್ಗಧಾಮ ಪ್ರವಾಸಿಗರಿಗೆ ಮುಕ್ತ ಮೊದಲಿಗೆ ಪಿಲಿಕುಳ ನಿಸರ್ಗಧಾಮದಲ್ಲಿರುವ ಜೈವಿಕ ಉದ್ಯಾನವನ, ಲೇಕ್ ಗಾರ್ಡನ್, ಸಂಸ್ಕೃತಿ ಗ್ರಾಮ, ಆರ್ಬೋರೇಟಮ್, ಗುತ್ತುಮನೆ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು. ಬಳಿಕ ಸರ್ಕಾರದ ಆದೇಶವನ್ನು ಅನುಸರಿಸಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯವನ್ನು ತೆರೆಯಲಾಗುವದು ಎಂದು ತಿಳಿಸಲಾಗಿದೆ.
ಪಿಲಿಕುಳ ನಿಸರ್ಗಧಾಮಕ್ಕೆ ಬರುವ ಪ್ರವಾಸಿಗರು ಕೆಲವೊಂದು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಸರ್ಗಧಾಮದ ಒಳಗೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಥರ್ಮಲ್ ಸ್ಕ್ರೀನಿಂಗ್ ಮಾಡುವಾಗ 37 ಡಿಗ್ರಿಗಿಂತ ಅಥವಾ 99.5 ಡಿಗ್ರಿ ಫ್ಯಾರನ್ ಹೀಟ್ ಅದಕ್ಕಿಂತ ಹೆಚ್ಚಿನ ದೇಹದ ಉಷ್ಣತೆ ಇದ್ದಲ್ಲಿ ಅವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.
ಜ್ವರ, ಕೆಮ್ಮು, ಶೀತ, ಗಂಟಲುನೋವು, ಉಸಿರಾಟದ ತೊಂದರೆ ಇದ್ದವರಿಗೂ ಪ್ರವೇಶ ನಿರಾಕರಿಸಲಾಗುತ್ತದೆ. ಸರೋವರದಲ್ಲಿ ಮಕ್ಕಳಿಗೆ ಆಟ ಆಡಲು ಅವಕಾಶ ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.