ಕರ್ನಾಟಕ

karnataka

ETV Bharat / state

ನೆಲ್ಯಾಡಿಯಲ್ಲಿ 55 ಲಕ್ಷ ರೂ. ಪಂಗನಾಮ ಹಾಕಿ ಪಿಗ್ಮಿ ಕಲೆಕ್ಟರ್ ಪರಾರಿ

ಚಿಟ್‌ಫಂಡ್‌ನಲ್ಲೂ ಪಿಗ್ಮಿ ಕಲೆಕ್ಟರ್​ನಿಂದ ಕೆಲವರಿಗೆ ಮೋಸ ಆಗಿದೆ ಎಂಬ ದೂರುಗಳು ಕೇಳಿಬಂದಿವೆ. ಈ ಪ್ರಕರಣದ ಆರೋಪಿ ಹಲವು ಮಂದಿಯಿಂದ ಅಂದಾಜು ರೂ.55 ಲಕ್ಷಕ್ಕೂ ಹೆಚ್ಚು ಕೈ ಸಾಲ ಮಾಡಿದ್ದಾನೆ ಎಂದು ಹೇಳಲಾಗಿದೆ.

ನೆಲ್ಯಾಡಿ ಪಿಗ್ಮಿ ಕಲೆಕ್ಟರ್ ಪ್ರವೀಣ್‌ಕುಮಾರ್‌ ನಾಪತ್ತೆ
ನೆಲ್ಯಾಡಿ ಪಿಗ್ಮಿ ಕಲೆಕ್ಟರ್ ಪ್ರವೀಣ್‌ಕುಮಾರ್‌ ನಾಪತ್ತೆ

By

Published : Jan 18, 2022, 8:08 PM IST

ನೆಲ್ಯಾಡಿ (ದ.ಕನ್ನಡ): ಸಹಕಾರ ಸಂಘವೊಂದರ ನೆಲ್ಯಾಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕನಾಗಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ಪ್ರವೀಣ್‌ ಕುಮಾರ್ ಎಂಬಾತ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾನೆ. ಈತ ನೆಲ್ಯಾಡಿಯ ಅಸುಪಾಸಿನಲ್ಲಿ ಹಲವು ಮಂದಿಯಿಂದ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದು, ಸಾಲ ಹಿಂತಿರುಗಿಸಲು ಸಾಧ್ಯವಾಗದೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಈ ಮಧ್ಯೆ ಇಂದು ಮಧ್ಯಾಹ್ನದ ವೇಳೆಗೆ ಸ್ಥಳೀಯ ಪತ್ರಿಕೆಯೊಂದರ ವರದಿಗಾರರಿಗೆ ವಾಟ್ಸಾಫ್ ಕರೆ ಮಾಡಿರುವ ಪ್ರವೀಣ್‌ಕುಮಾರ್, ನಾನು ಬಿಹಾರದಲ್ಲಿದ್ದು ಛೋಟಾ ರಾಜನ್ ಗ್ಯಾಂಗ್‌ನವರ ಜಾಲದೊಳಗೆ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾನೆ.

ಪ್ರವೀಣ್‌ಕುಮಾರ್‌ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ನೆಲ್ಯಾಡಿಯಲ್ಲಿ ಪಿಗ್ಮಿ ಸಂಗ್ರಾಹಕನಾಗಿ ಕೆಲಸ ಮಾಡಿಕೊಂಡಿದ್ದು, ಸ್ಥಳೀಯವಾಗಿ ಚಿರಪರಿಚಿತನಾಗಿದ್ದ. ಇಲ್ಲಿನ ಅಡಿಕೆ ವ್ಯಾಪಾರಿಗಳು, ಪ್ರತಿಷ್ಠಿತ ಉದ್ಯಮಿಗಳು ಸೇರಿದಂತೆ ಹಲವು ಮಂದಿಯ ವಿಶ್ವಾಸಗಳಿಸಿಕೊಂಡಿದ್ದ ಈತ, ಕೆಲವರಿಂದ ಲಕ್ಷಕ್ಕೂ ಮಿಕ್ಕಿ ಕೈ ಸಾಲ ಪಡೆದುಕೊಂಡು ಹಿಂತಿರುಗಿಸಲಾಗದೆ ಈಗ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಅಲ್ಲದೇ ಚಿಟ್‌ಫಂಡ್‌ನಲ್ಲೂ ಈತನಿಂದ ಕೆಲವರಿಗೆ ಮೋಸ ಆಗಿದೆ ಎಂಬ ದೂರುಗಳು ಕೇಳಿಬಂದಿವೆ. ಈತ ಹಲವು ಮಂದಿಯಿಂದ ಅಂದಾಜು ರೂ.55 ಲಕ್ಷಕ್ಕೂ ಹೆಚ್ಚು ಕೈ ಸಾಲ ಮಾಡಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಜ.3ರಿಂದ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್​​​ ಆಫ್ ಆಗಿದೆ. ಈತ ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿಯೂ ಆಗಿದ್ದ. ಈಗಾಗಲೇ ಮನೆಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜ.18ರಂದು ಮಧ್ಯಾಹ್ನದ ವೇಳೆಗೆ ಸ್ಥಳೀಯ ಪತ್ರಿಕೆಯೊಂದರ ನೆಲ್ಯಾಡಿ ವರದಿಗಾರರಿಗೆ 8792930641 ಎಂಬ ನಂಬರಿಂದ ಕರೆ ಮಾಡಿರುವ ಪ್ರವೀಣ್‌ಕುಮಾರ್‌ ನಾನು ಬಿಹಾರದಲ್ಲಿದ್ದು, ಛೋಟಾ ರಾಜನ್ ಗ್ಯಾಂಗ್‌ನವರ ಜಾಲದೊಳಗೆ ಸಿಲುಕಿಕೊಂಡಿದ್ದೇನೆ ಎಂದಿದ್ದಾನೆ. ಒಂದು ವರ್ಷದ ಹಿಂದೆ ನಾನು ಪೆರಿಯಶಾಂತಿ ಎಂಬಲ್ಲಿ ಇರುವ ವೇಳೆ ಫಾರ್ಚೂನರ್ ಕಾರೊಂದರಲ್ಲಿ ಬಂದವರು ನಾವು ನೆಲ್ಯಾಡಿಯಲ್ಲಿ ಹೊಸ ಉದ್ದಿಮೆ ಆರಂಭಿಸುತ್ತೇವೆ ಎಂದು ಹೇಳಿ ನೆಲ್ಯಾಡಿಯ ಪ್ರತಿಷ್ಠಿತ ಉದ್ಯಮಿಗಳ ಬಗ್ಗೆ ನನ್ನಲ್ಲಿ ವಿಚಾರಿಸಿ ಹೋಗಿದ್ದರು.

ಆ ಬಳಿಕ ಅವರು ನನ್ನೊಂದಿಗೆ ಸಂಪರ್ಕದಲ್ಲಿದ್ದು ಹಣ ದ್ವಿಗುಣಗೊಳಿಸುವುದಾಗಿ ಹೇಳಿ ಈ ತನಕ ನನ್ನಿಂದ ಸುಮಾರು 35 ಲಕ್ಷ ರೂ., ಪಡೆದುಕೊಂಡಿದ್ದಾರೆ. ಇದಕ್ಕೆ 70 ಲಕ್ಷ ರೂ.ವಾಪಸು ನೀಡುವುದಾಗಿ ಹೇಳಿ ಜ.3ರಂದು ನನ್ನನ್ನು ಶಿವಮೊಗ್ಗಕ್ಕೆ ಬರಲು ಹೇಳಿದ್ದು, ಅದರಂತೆ ನಾನು ಶಿವಮೊಗ್ಗಕ್ಕೆ ಹೋದಾಗ ಅಲ್ಲಿಂದ ನನ್ನನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿದ್ದಾರೆ. ಈಗ ನಾವು ಛೋಟಾ ರಾಜನ್ ಗ್ಯಾಂಗ್‌ನವರು ಎಂದು ಅವರು ನನ್ನಲ್ಲಿ ಹೇಳುತ್ತಿದ್ದು ,ಇದೀಗ ಅವರ ಕಣ್ಣುತಪ್ಪಿಸಿ ಅವರದ್ದೇ ಮೊಬೈಲ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ನೆಲ್ಯಾಡಿಯಲ್ಲಿ ಹಲವು ಮಂದಿಯಿಂದ ಲಕ್ಷಾಂತರ ರೂ.ಪಡೆದು ವಂಚಿಸಿ ನಾಪತ್ತೆಯಾಗಿರುವ ಪ್ರವೀಣ್‌ಕುಮಾರ್‌ರವರ ಈ ನಡೆ ಅನುಮಾನಕ್ಕೆ ಕಾರಣವಾಗಿದೆ.

ಜ.3ರಂದು ಮಧ್ಯಾಹ್ನದ ಬಳಿಕ ಪ್ರವೀಣ್ ನಾಪತ್ತೆಯಾಗಿದ್ದು, ಈತ ನಾಪತ್ತೆಯಾದ ಎರಡು ದಿನದ ಬಳಿಕ ಈತನ ಕೋಣೆಯಲ್ಲಿ ಶಿವಮೊಗ್ಗಕ್ಕೆ ಚಿಕಿತ್ಸೆಗೆಂದು ಹೋಗುವುದಾಗಿ ಬರೆದಿದ್ದ ಚೀಟಿಯೊಂದು ಪತ್ತೆಯಾಗಿತ್ತು. ಈ ಬಗ್ಗೆ ಪ್ರವೀಣ್‌‌ನ ಅಣ್ಣ ರವಿ ಮಾತನಾಡಿದ್ದು, ನರ ಸಂಬಂಧಿ ಕಾಯಿಲೆಗೆ ಪ್ರವೀಣ್ ಚಿಕಿತ್ಸೆ ಪಡೆಯುತ್ತಿದ್ದು, ಇದಕ್ಕೆ ಆತ ಚಿಕಿತ್ಸೆಗೆ ಹೋಗಿರಬಹುದೆಂದು ನಾವು ಶಿವಮೊಗ್ಗಕ್ಕೆ ತೆರಳಿ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿದ್ದೇವೆ. ಆದರೂ ಈತನ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದ ಹಿನ್ನೆಲೆಯಲ್ಲಿ ಜ.8ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

ABOUT THE AUTHOR

...view details