ಮಂಗಳೂರು:ಅಪ್ರಾಪ್ತ ಬಾಲಕನೋರ್ವ ಅಪ್ರಾಪ್ತೆಯೊಂದಿಗೆ ಬಲಾತ್ಕಾರವಾಗಿ ದೈಹಿಕ ಸಂಬಂಧ ಬೆಳೆಸಿದ ಬಗ್ಗೆ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ಬಂಧಿಸಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯೋರ್ವಳು ಓದನ್ನು ಅರ್ಧಕ್ಕೆ ಬಿಟ್ಟು ಮನೆಯಲ್ಲಿ ಇದ್ದು, ಈ ಸಂದರ್ಭ ಅವರ ದೂರದ ಸಂಬಂಧಿ ಬಾಲಕನೊಬ್ಬ ಆಗಾಗ ಮನೆಗೆ ಬರುತ್ತಿದ್ದ. ಆತ ಬಾಲಕಿಯೊಂದಿಗೆ ಸಲುಗೆಯಿಂದ ಇರುತ್ತಿದ್ದುದನ್ನು ಕಂಡು ಮನೆಗೆ ಬರಬಾರದೆಂದು ಮನೆಯವರು ತಾಕೀತು ಮಾಡಿದ್ದರು.
ಆದರೆ, ಆ ಅಪ್ರಾಪ್ತ ಬಾಲಕ ಅಪ್ರಾಪ್ತೆಯನ್ನು ಒಂದು ತಿಂಗಳ ಹಿಂದೆ ಮಡಿಕೇರಿಗೆ ಕರೆದುಕೊಂಡು ಹೋಗಿದ್ದ. ಬಳಿಕ ಮನೆಯವರು ಆಕೆಯನ್ನು ಅಲ್ಲಿಂದ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ, ಮಾರ್ಚ್ 22ರಂದು ಬಾಲಕಿ ಮತ್ತೆ ಮನೆ ಬಿಟ್ಟು ಹೋಗಿ ಆತನ ಮನೆಯಲ್ಲಿ ಇರುವುದಾಗಿ ತಿಳಿದು ಬಂದಿದೆ.
ಮತ್ತೊಮ್ಮೆ ಆಕೆಯನ್ನು ಕರೆದುಕೊಂಡು ಬಂದು ವಿಚಾರಿಸಿದಾಗ ಆರೋಪಿಯು ಈ ಹಿಂದೆ ಮನೆಗೆ ಬರುತ್ತಿರುವ ವೇಳೆ ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ಒತ್ತಾಯಪೂರ್ವಕವಾಗಿ ದೈಹಿಕ ಸಂಬಂಧ ಬೆಳೆಸಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಆದರೆ, ಬಾಲಕಿಯ ಪೋಷಕರು ಮರ್ಯಾದೆಗೆ ಅಂಜಿ ಈ ಬಗ್ಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ.
ಈಗ ಸಂಬಂಧಿಕರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿದ್ದು, ಬಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.