ಕರ್ನಾಟಕ

karnataka

ETV Bharat / state

ಸಾರ್ವಜನಿಕರ ಕುಂದುಕೊರತೆ ಆಲಿಸಲು ಮಂಗಳೂರಿನಲ್ಲಿ ಮತ್ತೆ 'ಫೋನ್​ ಇನ್'​ ಕಾರ್ಯಕ್ರಮ

ಮಂಗಳೂರಿನಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಫೋನ್​ ಇನ್​ ಕಾರ್ಯಕ್ರಮವನ್ನು ನಗರ ಪೊಲೀಸ್​ ಕಮೀಷನರ್​ ಕುಲದೀಪ್​ ಜೈನ್ ಮತ್ತೆ ಪ್ರಾರಂಭಿಸಿದ್ದಾರೆ.

mangalore
ಫೋನ್​ ಇನ್

By

Published : Jun 4, 2023, 9:12 AM IST

Updated : Jun 4, 2023, 9:26 AM IST

ಸಾರ್ವಜನಿಕರ ಕುಂದುಕೊರತೆ ಆಲಿಸಲು ಮಂಗಳೂರಿನಲ್ಲಿ ಮತ್ತೆ 'ಫೋನ್​ ಇನ್'​ ಕಾರ್ಯಕ್ರಮ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಫೋನ್​ ಇನ್​ ಕಾರ್ಯಕ್ರಮ ಮತ್ತೆ ಆರಂಭವಾಗಿದೆ. ಈ ಹಿಂದಿನ ನಗರ ಪೊಲೀಸ್ ಕಮೀಷನರ್ ಚಂದ್ರಶೇಖರ್ ಇದನ್ನು ಶುರು ಮಾಡಿದ್ದರು. ಕಾರ್ಯಕ್ರಮವು ಹರ್ಷ ಅವರು‌ ಕಮೀಷನರ್ ಆಗಿದ್ದ ಕೆಲ ಸಮಯಗಳ ಕಾಲ ಮುಂದುವರಿದಿತ್ತು. ಆದರೆ ಬಳಿಕ ಪೊಲೀಸ್​ ಕಮಿಷನರ್​ ಆಗಿ ಬಂದ ವಿಕಾಸ್​ ಕುಮಾರ್​, ಶಶಿಕುಮಾರ್​ ಅವಧಿಯಲ್ಲಿ ಮಾಡಿರಲಿಲ್ಲ. ಹೀಗಾಗಿ ಮಂಗಳೂರಿನ ನಾಗರಿಕರು ಫೋನ್​ ಇನ್​ ಕಾರ್ಯಕ್ರಮದ ನಿರೀಕ್ಷೆಯಲ್ಲಿದ್ದರು.

ಶನಿವಾರ ಕಮಿಷನರ್​ ಫೋನ್ ಇನ್ ಕಾರ್ಯಕ್ರಮ ಆರಂಭಿಸಿದ್ದು, ಇನ್ನು ‌ಮುಂದೆ ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ನಡೆಯಲಿದೆ. ಶನಿವಾರ ನಡೆದ ಫೋನ್ ಇನ್‌ನಲ್ಲಿ ಒಟ್ಟು 26 ಫೋನ್ ಕರೆಗಳನ್ನು ಸ್ವೀಕರಿಸಲಾಗಿದ್ದು, 16 ಕರೆಗಳು ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿದ್ದಾಗಿದ್ದವು. ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ವಿಚಾರಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ.

ಫೋನ್ ಇನ್‌ನಲ್ಲಿ ಸಲ್ಲಿಸಿರುವ ದೂರುಗಳ ಪೈಕಿ ಕೂಳೂರು ವಿ.ಅರ್.ಎಲ್ ಕಛೇರಿಯ ಎದುರುಗಡೆ ಇರುವ ವೆಲ್ಡಿಂಗ್ ಗ್ಯಾರೇಜ್​ನಲ್ಲಿ ವಾಹನಗಳನ್ನು ರಸ್ತೆ ಬದಿಯಲ್ಲಿಟ್ಟು ರಿಪೇರಿ ಮಾಡುತ್ತಿರುವ ಬಗ್ಗೆ ತಿಳಿಸಿದ್ದು ರಸ್ತೆ ಬದಿಯಲ್ಲಿರುವ ವಾಹನಗಳನ್ನು ತೆರವುಗೊಳಿಸಿ ಗ್ಯಾರೇಜ್ ಮಾಲಿಕರಿಗೆ ರಸ್ತೆಯಲ್ಲಿ ವಾಹನಗಳನ್ನಿಡದಂತೆ ಎಚ್ಚರಿಕೆ ನೀಡಲಾಗಿದೆ.

ಸುರತ್ಕಲ್ ಎಂ.ಆರ್.ಪಿ.ಎಲ್ ರಸ್ತೆಯಲ್ಲಿರುವ ಕಾಂಪ್ಲೆಕ್ಸ್​ನ ಎದುರಿನ ರಸ್ತೆಯಲ್ಲಿ, ಬಿಜೈ ಚರ್ಚ್ ಎದುರುಗಡೆಯ ರಸ್ತೆಯಲ್ಲಿ, ಮಂಗಳದೇವಿ ಎದುರುಗಡೆ ಹಾಗೂ ಡಿ-ಮಾರ್ಟ್ ಎದುರುಗಡೆಯ ರಸ್ತೆಯಲ್ಲಿರುವ ವಾಹನ ನಿಲುಗಡೆ ಮಾಡಿರುವುದನ್ನು ತೆರವುಗೊಳಿಸಲಾಗಿದೆ. ಸೆಂಟ್ರಲ್ ಮಾರ್ಕೆಟ್‌ನಲ್ಲಿ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದು ಹಾಗೂ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಇತರ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ.

ಬೆಂದೂರುವೆಲ್ ಬಳಿ ಇರುವ ಸೈಂಟ್ ಅಗ್ನೇಸ್ ಹಾಗೂ ತೆರೇಸಾ ಸ್ಕೂಲ್ ಬಳಿ ಈಗಾಗಲೇ ಸಿಬ್ಬಂದಿ ನಿಯೋಜಿಲಾಗಿದ್ದು ಅವರುಗಳು ವಾಹನಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕ್ ಮಾಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಂಪನಕಟ್ಟೆಯ ಜಂಕ್ಷನ್‌ನಲ್ಲಿ ಬಸ್ಸುಗಳಿಂದ ಇತರೆ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರಿದ್ದು ಬಸ್ಸುಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನಗರದ ಸಂಚಾರ ಸುರಕ್ಷತೆ ಹಾಗೂ ಸುಧಾರಣೆಗೆ ಹಲವಾರು ದೂರು, ಸಲಹೆ ಹಾಗೂ ಅಹವಾಲು ನೀಡಿದ್ದು, ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಮಾತನಾಡಿ, "ಮಂಗಳೂರು ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು ರಸ್ತೆ ಅಗಲ ಕಿರಿದಾಗಿದೆ. ಪಾರ್ಕಿಂಗ್‌ಗೆ ಸ್ಥಳ ಮೀಸಲಿಡದೇ ನಿಯಮ ಉಲ್ಲಂಘನೆಯಾಗಿದೆ. ಈ ಸಮಸ್ಯೆ ಪರಿಹಾರವಾಗದ ಹೊರತು ಸಂಚಾರ ವ್ಯವಸ್ಥೆಗೆ ಶಾಶ್ವತ ಪರಿಹಾರ ಅಸಾಧ್ಯ" ಎಂದಿದ್ದಾರೆ.

"ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಮ.ನ.ಪಾ ಅನುಮತಿ ನೀಡುತ್ತದೆ. ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದಿರುವುದಿಲ್ಲ. ನಿಯಮ ಪಾಲನೆ ಮಾಡಿದ್ದಾರೆಯೇ ಎಂಬುದನ್ನು ಪಾಲಿಕೆ ಅಧಿಕಾರಿಗಳೇ ಗಮನಿಸಬೇಕು. ಅಡ್ಡಾದಿಡ್ಡಿ ಪಾರ್ಕಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಲಾಗುವುದು" ಎಂದರು.

"ಹೊರರಾಜ್ಯ, ಜಿಲ್ಲೆಯಿಂದ ಬಂದ ನಿರಾಶ್ರಿತರು ಸ್ಮಾರ್ಟ್‌ಸಿಟಿಯ ಅಂದ ಕೆಡಿಸುತ್ತಿದ್ದಾರೆ. ಅಪರಾಧ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸೂಕ್ತ ವ್ಯವಸ್ಥೆಯಾಗಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ದೂರು ನೀಡಿದರು. ಈ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಹಾಗೂ ಮ.ನ.ಪಾ ಆಯುಕ್ತರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಮತ್ತೆ ಮತ್ತೆ ಗಮನಿಸಲಾಗುತ್ತದೆ. ಪೊಲೀಸ್ ಇಲಾಖೆಯಿಂದ ಗಸ್ತು ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ" ಎಂದು ತಿಳಿಸಿದರು.

"ಮೂಡುಬಿದಿರೆಯಲ್ಲಿ ಆಟೋರಿಕ್ಷಾ ಚಾಲಕರು ಮೀಟರ್ ಹಾಕದೆ ನಿಗದಿತ ದರಕ್ಕಿಂತ ಅಧಿಕ ದರ ಪಡೆಯುತ್ತಿದ್ದಾರೆ ಎಂಬ ದೂರಿಗೆ ಆರ್‌ಟಿಒ ಜತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು" ಎಂದರು. ಹೊಯ್ಗೆಬೈಲ್‌ನಲ್ಲಿ ನೆರೆಮನೆಯವರು ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ. ಅಲ್ಲಿಂದ ಆಯುಕ್ತರಿಗೆ ಪತ್ರ ಬಂದಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಸಮಸ್ಯೆ ಈಗಲೂ ಮುಂದುವರಿದಿದೆ ಎಂದು ಮಹಿಳೆಯೊಬ್ಬರು ಪೋನ್ ಇನ್ ಕಾರ್ಯಕ್ರಮದಲ್ಲಿ ದೂರಿದರು. ಉರ್ವ ಪೊಲೀಸ್ ಠಾಣೆಯಿಂದ ಮತ್ತೊಮ್ಮೆ ಸಂಪರ್ಕಿಸಲು ತಿಳಿಸುವುದಾಗಿ ಆಯುಕ್ತರು ಹೇಳಿದರು.

"ಸಾರ್ವಜನಿಕರಿಗೆ ಸಮಸ್ಯೆ, ದೂರು, ಮಾಹಿತಿ ಹಂಚಿಕೊಳ್ಳಲು ಅನುಕೂಲವಾಗುವಂತೆ ನೇರ ಫೋನ್ ಇನ್ ಕಾರ್ಯಕ್ರಮ ಆರಂಭಿಸಿದ್ದೇವೆ. 26 ಕರೆಗಳು ಬಂದಿತ್ತು. ಪ್ರತಿ ತಿಂಗಳ ಮೊದಲ ಶನಿವಾರ ಆಯೋಜಿಸಲಾಗುತ್ತದೆ" ಎಂದು ಕುಲದೀಪ್ ಜೈನ್ ತಿಳಿಸಿದರು.

ಇದನ್ನೂ ಓದಿ:CEIR ಪೋರ್ಟಲ್​ನಿಂದ ಪೊಲೀಸರ ಪ್ರಯತ್ನ.. ಮತ್ತೆ 93 ಮೊಬೈಲ್ ಫೋನ್ ವಾರಸುದಾರರಿಗೆ ಹಸ್ತಾಂತರ

Last Updated : Jun 4, 2023, 9:26 AM IST

ABOUT THE AUTHOR

...view details