ಮಂಗಳೂರು: ಮತಾಂತರ ನಿಷೇಧ ವಿಧೇಯಕ ಜಾರಿಗೊಳಿಸುತ್ತಿರುವ ಸರ್ಕಾರಕ್ಕೆ ಈ 10 ವರ್ಷಗಳಲ್ಲಿ ಎಷ್ಟು ಮಂದಿ ಹಿಂದೂಗಳು ಬೇರೆ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬುದರ ಬಗ್ಗೆ ಅಂಕಿ-ಅಂಶಗಳನ್ನು ನೀಡಲು ಸಾಧ್ಯವೇ? ಎಂದು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಪ್ರಶ್ನಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಈ ಬಗ್ಗೆ ಇವರಲ್ಲಿ ಸರಿಯಾದ ಅಂಕಿ-ಅಂಶಗಳೇ ಇಲ್ಲ. ನಾನು ಮತಾಂತರ ನಿಷೇಧ ವಿಧೇಯಕ ವಿರೋಧ- ಪರ ಅನ್ನೋದಕ್ಕಿಂತ ಹೆಚ್ಚಾಗಿ ಮತಾಂತರಗೊಂಡವರ ಬಗ್ಗೆ ಸರಿಯಾದ ಅಂಕಿ-ಅಂಶಗಳನ್ನು ನೀಡಲಿ ಎಂದು ಕೇಳುತ್ತಿದ್ದೇನೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ಸಿಗುವಲ್ಲಿ ಲೋಪದೋಷಗಳಾಗಿರಬಹುದು. ಆದರೆ, ಇನ್ನಾದರೂ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಾದರೂ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಅಭಿಯಾನದ ಮಾದರಿಯಲ್ಲಿ ಗೌರವ ಕೊಡಲಿ.
ಆದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಪಾಲಾಗಿರುವವರಿಗೆ, ಬೀದಿಗೆ ಬಿದ್ದವರಿಗೆ ಪಿಂಚಣಿ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆದರೆ, ನನಗೆ ಗೊತ್ತಿದ್ದ ಮಟ್ಟಿಗೆ ತುರ್ತು ಪರಿಸ್ಥಿತಿ ಸಂದರ್ಭ ಬೀದಿಗೆ ಬಿದ್ದವರು ಬಹಳಷ್ಟು ಕಡಿಮೆ. ಆದ್ದರಿಂದ, ನಾನು ವಿರೋಧ ಮಾಡುವುದಿಲ್ಲ. ಆದರೆ ಬಹಳ ಜಾಗರೂಕತೆಯಿಂದ ಇದನ್ನು ಮಾಡುವುದು ಉತ್ತಮ. ಇದು ದುರುಪಯೋಗ ಆಗದಿರಲಿ ಎಂದು ಹೇಳಿದರು.
ನಾನು ಈಗ ಸಕ್ರಿಯ ರಾಜಕಾರಣದಲ್ಲಿದ್ದು, ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ, ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸದಿರುವ ಸ್ಥಿತಿಯಲ್ಲಿ ನಾನು ಯಾವುದೇ ಹುದ್ದೆಯನ್ನು ಹೊಂದಿಲ್ಲ. ಇತ್ತೀಚಿನ ದಿನಗಳಲ್ಲಿ ರಾಜಕಾರಣ ವ್ಯಕ್ತಿಗತವಾಗಿದ್ದು, ವಿಷಯಾಧಾರಿತವಾಗಿಲ್ಲ. ಕೇವಲ 8-10 ಮಂದಿಯಿಂದ ರಾಜಕಾರಣ ನಡೆಯುತ್ತಿದೆ. ಇದರಿಂದ ಜನರಿಗೆ ರಾಜಕೀಯದ ಮೇಲೆ ಜುಗುಪ್ಸೆ ಬಂದು ಬಿಟ್ಟಿದೆ.
ಹಿಂದುತ್ವವನ್ನು ವಿರೋಧ ಮಾಡುವ ಬಗ್ಗೆ ಯಾವ ಕಾರಣಕ್ಕಾಗಿ ವಿರೋಧ ಮಾಡಬೇಕು ಎಂಬುದು ಮೊದಲು ಮೂಡುವ ಪ್ರಶ್ನೆ. ಹಿಂದುತ್ವಕ್ಕೆ ಪರ್ಯಾಯವೇನು? ಎಂಬುದನ್ನು ಹೇಳದೆ ಹಿಂದುತ್ವವನ್ನು ವಿರೋಧ ಮಾಡುವುದರಲ್ಲಿ ಅರ್ಥವೇ ಇಲ್ಲ. 2014 ಹಾಗು ಆ ಬಳಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೂ, ಮೋದಿಯವರಿಗೆ ಬಂದಿರೋದು 40 ಶೇ. ಕ್ಕಿಂತಲೂ ಕಡಿಮೆ ಮತ . ಹಾಗಾದರೆ, ಉಳಿದ 60% ಎಲ್ಲಿಗೆ ಹೋಗಿದೆ? ಎಂಬುದನ್ನು ಆಲೋಚನೆ ಮಾಡಬೇಕಾಗಿದೆ ಎಂದು ಪಿಜಿಆರ್ ಸಿಂಧ್ಯಾ ಹೇಳಿದರು.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆ: ಚಾಮರಾಜನಗರದಲ್ಲಿ ಸಿದ್ದು, ಡಿಕೆಶಿ ಜಂಟಿ ಸಭೆ