ಉಪ್ಪಿನಂಗಡಿ(ದಕ್ಷಿಣ ಕನ್ನಡ): ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ತಲವಾರು ದಾಳಿ ಪ್ರಕರಣದ ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆದೊಯ್ದ ಪಾಪ್ಯುಲರ್ ಫ್ರಂಟ್ ಸಂಘಟನೆ ಮುಖಂಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಠಾಣೆ ಎದುರು ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಉಪ್ಪಿನಂಗಡಿ ಪೊಲೀಸರು ಇತ್ತಿಚೆಗೆ ಉಪ್ಪಿನಂಗಡಿಯಲ್ಲಿ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ರೀತಿ ನೋಟಿಸ್ ಜಾರಿಗೊಳಿಸಿ ಮೂವರು ಪಿಎಫ್ಐ ಮುಖಂಡರನ್ನು ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆಸಿದ್ದರು. ಈ ಮುಖಂಡರ ಬಿಡುಗಡೆಗೆ ಆಗ್ರಹಿಸಿ ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೂ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಘಟನಾ ಸ್ಥಳಕ್ಕೆ ಬಂಟ್ವಾಳ ಠಾಣಾಧಿಕಾರಿ ನಾಗರಾಜ್ ತೆರಳಿ, ಪ್ರತಿಭಟನಾನಿರತರ ಮನವೊಲಿಸುವ ಯತ್ನಿಸಿದ್ದರೂ ಅದು ವಿಫಲವಾಗಿತ್ತು. ಇಷ್ಟೊಂದು ಜನ ಠಾಣೆಯ ಎದುರು ಸೇರಿರುವುದು ತಪ್ಪು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಪೊಲೀಸ್ ಕರ್ತವ್ಯಕ್ಕೂ ನೀವು ಅಡ್ಡಿ ಪಡಿಸುತ್ತಿದ್ದೀರಿ. ಕೋವಿಡ್ ನಿಯಮಾವಳಿಯೂ ಇಲ್ಲಿ ಉಲ್ಲಂಘನೆಯಾಗುತ್ತಿದೆ. ಎಲ್ಲರೂ ಇಲ್ಲಿಂದ ತೆರಳಬೇಕು, ಪೊಲೀಸರ ಲಾಠಿ ಹಾಗೂ ಪಿಸ್ತೂಲ್‌ಗೆ ಕಮ್ಯೂನಿಟಿ ಇಲ್ಲ ಎಂದು ಎಚ್ಚರಿಕೆ ಸಂದೇಶಗಳನ್ನು ಧ್ವನಿವರ್ಧಕದ ಮೂಲಕ ನೀಡಿ ಮನವಿ ಮಾಡಿದ್ದರು. ಆದರೀ ಕೂಡ ಪ್ರತಿಭಟನಾಕಾರರು ಸ್ಥಳದಿಂದ ತೆರಳಿರಲಿಲ್ಲ, ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮಾತುಕತೆ ನಡೆಸಿ ಠಾಣೆಗೆ ಕರೆಸಿದ ಓರ್ವ ಪಿಎಫ್ಐ ಮುಖಂಡನನ್ನು ಬಿಟ್ಟು ಕಳುಹಿಸಲಾಗಿತ್ತು.