ಸುಳ್ಯ(ದಕ್ಷಿಣ ಕನ್ನಡ):ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಸುಳ್ಯದ ಗಾಂಧಿ ನಗರದಲ್ಲಿರುವ ಆಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಯನ್ನು ಕಾನೂನು ಪ್ರಕಾರ ಜಪ್ತಿ ಮಾಡಿದೆ.
ಪಿಎಫ್ಐ ಕಚೇರಿ ಸ್ವಾಧೀನಕ್ಕೆ ಪಡಿಸಿಕೊಂಡ ಎನ್ಐಎ:ಆರೋಪಿಗಳು ಪ್ರವೀಣ್ ನೆಟ್ಟಾರು ಅವರ ಹತ್ಯೆ ಸಲುವಾಗಿ ಸಂಚು ಸಭೆಗಳನ್ನು ನಡೆಸಲು ಈ ಕಚೇರಿಯನ್ನು ಬಳಸುತ್ತಿದ್ದರು. ಜನರಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಉದ್ದೇಶದಿಂದ ಮತ್ತು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಭಾರತದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರಲು ಪ್ರಯತ್ನಿಸಿದೆ ಎಂಬುದನ್ನು ಎನ್ಐಎ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. 1967ರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಕಲಂ 25ರ ಅನ್ವಯ ಕೃತ್ಯಕ್ಕೆ ಬಳಸಿದ ಸುಳ್ಯ ಪಿಎಫ್ಐ ಕಚೇರಿಯನ್ನು ಎನ್ಐಎ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ.
ಇದನ್ನೂ ಓದಿ:ಭಾರಿ ಭದ್ರತೆಯೊಂದಿಗೆ ಸಾಬರಮತಿಯಿಂದ ಯುಪಿಗೆ ಕರೆತಂದ ಪೊಲೀಸರು.. ಡಾನ್ ಅತೀಕ್ಗೆ ಹತ್ಯೆ ಭೀತಿ
ಆದೇಶ ಪತ್ರದಲ್ಲೇನಿದೆ?:ಈ ಮೂಲಕ ಪೂರ್ವಾನುಮತಿ ಹೊರತುಪಡಿಸಿ ಯಾವುದೇ ಆಸ್ತಿಯನ್ನು, ಕಚೇರಿಯನ್ನು ಇತರರಿಗೆ ವರ್ಗಾಯಿಸಲು, ಗುತ್ತಿಗೆಗೆ ನೀಡಲು, ವಿಲೇವಾರಿ ಮಾಡಲು, ಅದರ ಸ್ವರೂಪವನ್ನು ಬದಲಾಯಿಸಲು ಅಥವಾ ಇತರ ವ್ಯವಹಾರಗಳನ್ನು ನಿರ್ಬಂಧಿಸಲಾಗಿದೆ. ಬೆಂಗಳೂರು ವಿಭಾಗದ ಎನ್ಐಎ ಯ ಮುಖ್ಯ ತನಿಖಾಧಿಕಾರಿ ಷಣ್ಮುಗಂ ಎಂ. ಅವರು ಈ ಬಗ್ಗೆ ನೋಟೀಸ್ ಜಾರಿಗೊಳಿಸಿ ಆದೇಶಿಸಿದ್ದಾರೆ. ಮಾತ್ರವಲ್ಲದೆ ಈ ಆದೇಶದ ಪ್ರತಿಯನ್ನು ನವದೆಹಲಿಯ ಎಂಎಚ್ಎ ಜಂಟಿ ಕಾರ್ಯದರ್ಶಿಗಳಿಗೆ, ಡಿಜಿ ಎನ್ಐಎ ನವದೆಹಲಿ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು, ಠಾಣಾಧಿಕಾರಿಗಳು ಸುಳ್ಯ ಪೊಲೀಸ್ ಠಾಣೆಗೆ ರವಾನೆ ಮಾಡಿರುವ ಬಗ್ಗೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.