ಕಡಬ(ದಕ್ಷಿಣ ಕನ್ನಡ):ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಕಡಬದ ವ್ಯಕ್ತಿಯೋರ್ವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಡಬ ತಾಲೂಕಿನ ಕುಟ್ರುಪಾಡಿ ನಿವಾಸಿ ವಿಕ್ಟರ್ ಮಾರ್ಟೀಸ್ ಎಂಬವರು ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು.
ಈ ಅರ್ಜಿಯು ಮುಖ್ಯ ನ್ಯಾ. ಪಿ.ಬಿ ವರಾಲೆ ನೇತೃತ್ವದ ನ್ಯಾಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯದಲ್ಲಿ ಮತಾಂತರವನ್ನು ನಿಷೇಧಿಸಲು ರಾಜ್ಯ ಸರ್ಕಾರ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಕಾಯ್ದೆ-2020 ಅನ್ನು ಜಾರಿಗೊಳಿಸಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾಗುತ್ತಿದ್ದಾರೆ, ಮತಾಂತರ ಕಾನೂನುಬದ್ಧ ಮಾಡುತ್ತಿದ್ದೇವೆ: ಸಿಎಂ
ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ: ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವ ಅರ್ಜಿದಾರರ ವಿರುದ್ಧವೇ 2 ಕ್ರಿಮಿನಲ್ ಪ್ರಕರಣಗಳಿವೆ. ಈ ವ್ಯಕ್ತಿಯ ಅರ್ಜಿಯನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ಮಾನ್ಯ ನ್ಯಾಯಪೀಠ ವಿಕ್ಟರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ.28ಕ್ಕೆ ಮುಂದೂಡಿದೆ.
ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ ವಿಕ್ಟರ್ ಮಾರ್ಟೀಸ್ ಮತಾಂತರ ಆರೋಪ ಇಲ್ಲ:ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಕ್ಟರ್ 'ನನ್ನ ವಿರುದ್ಧ ಎಲ್ಲೂ ಮತಾಂತರ ಮಾಡಿರುವ ಪ್ರಕರಣ ದಾಖಲಾಗಿಲ್ಲ. ವಿನಾಕಾರಣ ಮತಾಂತರ ಆರೋಪ ಎಂಬಂತೆ ಬಿಂಬಿಸಿ ನನ್ನ ತೇಜೋವಧೆ ಮಾಡಲಾಗುತ್ತಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇನೆ. ನಾನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನನ್ನ ವಿರುದ್ಧ ಕೆಲವು ಪ್ರಕರಣಗಳು ಇರುವ ಕಾರಣದಿಂದಾಗಿ ಮಾನ್ಯ ನ್ಯಾಯಾಲಯವು ನ.28ಕ್ಕೆ ಮುಂದೂಡಿದೆ' ಎಂದು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಕಾಯ್ದೆ ಉಲ್ಲಂಘಿಸಿದ್ರೆ ಯಾವ ಶಿಕ್ಷೆ?