ದಕ್ಷಿಣ ಕನ್ನಡ:ಕೊರೊನಾ ವೈರಸ್ ಭೀತಿ ಹಿನ್ನೆಲೆ ಸ್ಥಗಿತಗೊಂಡಿದ್ದ 78 ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಸ್ಥಗಿತವಾಗಿದ್ದ 78 ಕಟ್ಟಡ ಕಾಮಗಾರಿ ಪುನಾರಂಭಕ್ಕೆ ಅನುಮತಿ - dc sindhu b roopesh
ಲಾಕ್ಡೌನ್ ಜಾರಿಯಾದ ಬೆನ್ನಲ್ಲೆ ಕೊರೊನಾ ಭೀತಿಯಿಂದಾಗಿ ರಾಜ್ಯದ ಎಲ್ಲಾ ಕಾಮಗಾರಿ ಕೆಲಸಗಳಿಗೂ ಬ್ರೇಕ್ ಹಾಕಲಾಗಿತ್ತು. ಇದೀಗ ದಕ್ಷಿಣ ಕನ್ನಡದ 78 ಕಟ್ಟಡ ಕಾಮಗಾರಿಗಳಿಗೆ ಡಿಸಿ ಸಿಂಧೂ ಬಿ. ರೂಪೇಶ್ ಅನುಮತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದ ಅನೇಕ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಸರಕಾರದ ನಿರ್ದೇಶನದಂತೆ ಕಟ್ಟಡ ಕಾಮಗಾರಿ ಆರಂಭಿಸಲು ಅನುಮತಿ ನೀಡಲಾಗಿದ್ದು, ಈ ಪೈಕಿ ನಾಲ್ಕು ಕಾಮಗಾರಿಗಳು ಆರಂಭವಾಗಿದೆ. ಉಳಿದ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾರ್ಮಿಕರು ಕಟ್ಟಡ ನಿರ್ಮಾಣ ಸ್ಥಳದಲ್ಲೇ ಇದ್ದು ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು, ಕೋವಿಡ್-19 ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್‌ರನ್ನು ನೇಮಿಸಬೇಕು, ಸಂಬಂಧಪಟ್ಟ ಇಲಾಖೆಯು ಕೋರುವ ಮಾಹಿತಿಯನ್ನು ಸಕಾಲಕ್ಕೆ ನೀಡಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.