ಕರ್ನಾಟಕ

karnataka

By

Published : Oct 21, 2020, 7:25 PM IST

ETV Bharat / state

ರಸ್ತೆ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ: ಸೇಸಪ್ಪ ಬೆದ್ರಕಾಡು

ಪ.ಜಾ-ಪ.ಪಂ. ಕಾಲೋನಿಗಳಿಗೆ ಮಂಜೂರಾದ ಅನುದಾನವನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಕಾಮಗಾರಿ ನಡೆಸುವ ಕ್ರಮ ಸರಿಯಲ್ಲ, ಈ ಬಗ್ಗೆ ಕಾನೂನು ಹೋರಾಟ ಮಾಡಲಿದ್ದೇವೆ..

ಸೇಸಪ್ಪ ಬೆದ್ರಕಾಡು
sesappa bedrakadu

ಕಡಬ:ಪರಿಶಿಷ್ಟ ಕಾಲೋನಿ ರಸ್ತೆ ಅಭಿವೃದ್ದಿಗೆ ಬಿಡುಗಡೆಗೊಂಡ ಅನುದಾನವನ್ನು ಬೇರೆ ರಸ್ತೆಯೊಂದರ ಕಾಂಕ್ರೀಟಿಕರಣಕ್ಕೆ ಬಳಸಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ದಲಿತ್ ಸೇವಾ ಸಮಿತಿ, ಇದೀಗ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ.

ಕಡಬ ತಾಲೂಕಿನ ಪೆರಾಬೆ ಗ್ರಾಪಂ ವ್ಯಾಪ್ತಿಯ ಅತ್ರಿಜಾಲು-ಕಡಿರಡ್ಕ(ಪ.ಜಾ) ಮತ್ತು ಅಗತ್ತಾಡಿ-ಅತ್ರಿಜಾಲು (ಪ.ಪಂ) ಕಾಲೋನಿಗೆ ರಸ್ತೆ ಅಭಿವೃದ್ದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಶಾಸಕರ ಶಿಫಾರಸ್ಸಿನ ಮೇರೆಗೆ ಬಿಡುಗಡೆಯಾದ 80 ಲಕ್ಷ ರೂಪಾಯಿಗಳ ಅನುದಾನವನ್ನು ಇದೇ ಕಾಲೋನಿಗೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಬಳಸಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ.

ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು

ಈ ಹಿಂದೆಯೂ ಈ ರಸ್ತೆಯ ಕಾಮಗಾರಿ ನಡೆಸಲು ಬಂದ ಗುತ್ತಿಗೆದಾರರ ಜೆಸಿಬಿಗೆ ತಡೆಯೊಡ್ಡಿದ ಘಟನೆಯೂ ನಡೆದಿತ್ತು. ಇದೀಗ ಕಾಮಗಾರಿ ಪ್ರಾರಂಭಿಸಿ ಜಲ್ಲಿ ಹಾಕಲಾಗಿದ್ದು, ಈ ಹಿನ್ನೆಲೆಯಲ್ಲಿ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ಅಲ್ಲಿಯ ಕಾಲೋನಿಯ ನಿವಾಸಿಗಳು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಸುಳ್ಯ ಶಾಸಕ ಎಸ್.ಅಂಗಾರರವರು ಬಂದು ಕಾಲೋನಿ ರಸ್ತೆಯಲ್ಲಿ ಗುದ್ದಲಿ ಪೂಜೆ ನಡೆಸಿದ್ದರು. ಅಲ್ಲದೆ ಬಹುಕಾಲದ ಕಾಲೋನಿ ನಿವಾಸಿಗಳ ಬೇಡಿಕೆ ಈಡೇರಲಿದೆ ಎಂದು ಕಾಲೋನಿ ನಿವಾಸಿಗಳಲ್ಲಿ ವಿಶ್ವಾಸ ತುಂಬಿದ್ದರು. ಇದೀಗ ಶಾಸಕರ ಶಿಫಾರಸ್ಸಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಗೊಂಡ 80 ಲಕ್ಷ ರೂ. ಅನುದಾನದಲ್ಲಿ ಅತ್ರಿಜಾಲು-ಕಡಿರಡ್ಕ(ಪ.ಜಾ) ಮತ್ತು ಅಗತ್ತಾಡಿ-ಅತ್ರಿಜಾಲು (ಪ.ಪಂ) ಕಾಲೋನಿಗೆ ರಸ್ತೆಯನ್ನು ಅಭಿವೃದ್ದಿ ಮಾಡುವುದನ್ನು ಬಿಟ್ಟು ಕಜೆ ಎಂಬಲ್ಲಿಂದ ಕಾಮಗಾರಿ ಆರಂಭಿಸುವ ಯೋಜನೆ ರೂಪಿಸಿರುವುದು ಕಾಲೋನಿಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಪ.ಜಾ-ಪ.ಪಂ. ಕಾಲೋನಿಗಳಿಗೆ ಮಂಜೂರಾದ ಅನುದಾನವನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಕಾಮಗಾರಿ ನಡೆಸುವ ಕ್ರಮ ಸರಿಯಲ್ಲ, ಈ ಬಗ್ಗೆ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಸುಳ್ಯ ಶಾಸಕ ಅಂಗಾರ ಅವರು, ನಾವು ಅನುದಾನವನ್ನು ಇಡುವಾಗ ಕಾಲೋನಿ ನಿವಾಸಿಗಳಲ್ಲಿ ಕೇಳಿ ಇಡುವುದಲ್ಲ, ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟು ಆಯಾ ಪ್ರದೇಶದ ಎಲ್ಲ ಜನರಿಗೆ ಪ್ರಯೋಜನವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿರುವಾಗ ವೃಥಾ ರಾಜಕೀಯ ಮಾಡಿ ಗೊಂದಲ ಸೃಷ್ಟಿಸಬಾರದು, ಇದರಿಂದ ಮುಂದಿನ ಅಭಿವೃದ್ದಿಗೆ ತೊಡಕಾಗುತ್ತದೆ ಎಂದು ಹೇಳಿದರು.

ABOUT THE AUTHOR

...view details