ಮಂಗಳೂರು: ಎಂಆರ್‌ಪಿಎಲ್ ನಿಂದ ಕುತ್ತೆತ್ತೂರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಚೇರಿ ಬಳಿ ದುರ್ವಾಸನೆಯುಕ್ತ ರಾಸಾಯನಿಕವು ಚರಂಡಿಗೆ ಮಂಗಳವಾರ ರಾತ್ರಿ ಸೋರಿಕೆಯಾಗಿ ಹಲವರು ಅಸ್ವಸ್ಥಗೊಂಡಿದ್ದು, ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ದುರ್ವಾಸನೆಯುಕ್ತ ರಾಸಾಯನಿಕ ಸೋರಿಕೆಯು ಅಮೋನಿಯಾ ಆಗಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
MRPL ನಿಂದ ಅಮೋನಿಯಾ ಸಹಿತ ಅಪಾಯಕಾರಿ ಕೆಮಿಕಲ್ ನೀರಿನ ಮೂಲಕ್ಕೆ ಹರಿದ ಕುತ್ತೆತ್ತೂರು ಪ್ರದೇಶಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಇಂದು ಪರಿಶೀಲನೆ ನಡೆಸಿದರು. ಘಟನೆಯಿಂದ ಮೀನುಗಳು ಸಾವನ್ನಪ್ಪಿದ್ದು, ದುರ್ವಾಸನೆಯಿಂದ ಜನರು ಕಂಗಲಾಗಿದ್ದರು. ಹಲವರು ಅಸ್ವಸ್ಥರಾಗಿದ್ದು, ಇಂದು ಅವರನ್ನು ವೈದ್ಯರು ಪರೀಕ್ಷಿಸಿದರು.
ಘಟನೆ ಬಗ್ಗೆ ಎಂಆರ್‌ಪಿಎಲ್ ಸಂಸ್ಥೆ ಪ್ರತಿಕ್ರಿಯಿಸಿ, ನಿರುಪಯುಕ್ತ ಗ್ಯಾಸ್ ಸಿಸ್ಟಮ್ ಬಂದ್ ಮಾಡುವ ಫ್ಲೇರ್ ಗ್ಯಾಸ್‌ನಿಂದ ಈ ಘಟನೆ ನಡೆದಿದೆ. ಅಮೋನಿಯ ಸೋರಿಕೆಯಾಗಿಲ್ಲ. ಈ ನೀರನ್ನು ಪ್ರಕ್ರಿಯೆಗೆ ಕಳುಹಿಸಲು ಎರಡು ಪಂಪ್‌ಗಳೊಂದಿಗೆ ಸ್ವಯಂಚಾಲಿತ ಪಂಪಿಂಗ್ ವ್ಯವಸ್ಥೆ ಇದೆ. ನಿನ್ನೆ ಸುರಿದ ಭಾರಿ ಮಳೆಗೆ ಸ್ವಯಂಚಾಲಿತ ವ್ಯವಸ್ಥೆ ವಿಫಲವಾಗಿತ್ತು. ಇದರಿಂದ ನೀರು ಮಳೆನೀರಿನ ಜೊತೆ ಸೇರಿ ಕಾಲುವೆಗೆ ಹೋಗಿದೆ. ಈ ನೀರನ್ನು ಪ್ರಕ್ರಿಯೆಗೆ ಕಳುಹಿಸಲಾಗುತ್ತದೆ. ಇದನ್ನು ಸರಿಪಡಿಸುವ ಕ್ರಮವನ್ನು ತಕ್ಷಣವೇ ತೆಗೆದುಕೊಳ್ಳಲಾಗಿದೆ. ನಾವು KSPCBಗೆ ವರದಿ ನೀಡಿದ್ದೇವೆ. ಅವರು ಎಲ್ಲ ಮಾದರಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
MRPL ಆಗಿದೆ ಅತಿದೊಡ್ಡ ಪೆಟ್ರೋಕೆಮಿಕಲ್ಸ್ ರಿಫೈನರಿ:ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) 2022-23ನೇ ಸಾಲಿನಲ್ಲಿ ರಾಷ್ಟ್ರದ ಏಕೈಕ ಅತಿದೊಡ್ಡ PSU-ರಿಫೈನರಿ ಆಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 17.14 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ ಮೂಲಕ MRPL ಈ ಸಾಧನೆ ಮಾಡಿದೆ. ಇದು ಭಾರತದ ಪೆಟ್ರೋಲಿಯಂ ಸಂಸ್ಕರಣಾ ಇತಿಹಾಸದಲ್ಲಿ ಯಾವುದೇ ಏಕ ಸ್ಥಳದ PSU ಸಂಸ್ಕರಣಾಗಾರದಿಂದ ನಡೆದ ಅತ್ಯಧಿಕ ಸಂಸ್ಕರಣೆಯಾಗಿದೆ. MRPL ರಾಷ್ಟ್ರದ PSU ಪೆಟ್ರೋಲಿಯಂ ಸಂಸ್ಕರಣಾಗಾರಗಳಿಂದ ಸಂಸ್ಕರಿಸಿದ ಒಟ್ಟು ಕಚ್ಚಾ ತೈಲದ 10% ಅನ್ನು ಸಂಸ್ಕರಿಸುತ್ತದೆ.