ಪುತ್ತೂರು: ರೈಲುಗಳ ಮೂಲಕ ಬೆಂಗಳೂರು ಸೇರಿದಂತೆ ಕೆಲವೆಡೆಯಿಂದ ಸಾಕಷ್ಟು ಮಂದಿ ಪುತ್ತೂರು ಮತ್ತು ಅಕ್ಕಪಕ್ಕದ ತಾಲೂಕುಗಳಿಗೆ ಬಂದಿದ್ದಾರೆ. ವಿಮಾನಗಳ ಮೂಲಕವೂ ಆಗಮಿಸಿದ್ದಾರೆ. ಅವರೆಲ್ಲ ಸ್ವ ಇಚ್ಛೆಯಿಂದ ತಮ್ಮ ಮನೆಗಳಲ್ಲಿ 14 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಚಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಕೊರೊನಾ ಮುಂಚೂಣಿ ಯೋಧರು ಈ ನಿಟ್ಟಿನಲ್ಲಿ ಸಹಕರಿಸಬೇಕು. ಯಾರೆಲ್ಲ ರೈಲು, ವಿಮಾನಗಳ ಮೂಲಕ ಬಂದಿದ್ದಾರೋ ಅವರೆಲ್ಲರೂ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸುವುದನ್ನು ಖಚಿತಪಡಿಸಲು ಸಹಕರಿಸಬೇಕು. ವೈಯಕ್ತಿಕವಾಗಿ ಇವರೆಲ್ಲ ಸ್ವಇಚ್ಛೆಯಿಂದ ಕ್ವಾರಂಟೈನ್‌ಗೆ ಒಳಪಡುವ ಮೂಲಕ ತಮ್ಮ ಆರೋಗ್ಯ ಮತ್ತು ಸಮಾಜದ ಆರೋಗ್ಯ ರಕ್ಷಣೆಗಾಗಿ ತಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದ್ದಾರೆ.