ಬೆಳ್ತಂಗಡಿ: ಕೊರೊನಾದಿಂದ ಇಡೀ ಜಗತ್ತು ತತ್ತರಿಸಿದೆ. ಇದು ಕೇವಲ ಒಬ್ಬರು, ಇಬ್ಬರ ಸಮಸ್ಯೆಯಲ್ಲ. ಆದ್ದರಿಂದ ಜನತೆ ಯಾವುದೇ ಕಾರಣಕ್ಕೂ ವಿಚಲಿತರಾಗದೆ, ಶಾಂತ ಚಿತ್ತದಿಂದ ಸವಾಲು ಎದುರಿಸಬೇಕಿದೆ. ಮುಖ್ಯವಾಗಿ ವೈದ್ಯರು ಹಾಗೂ ಸರ್ಕಾರ ಸೂಚಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಮೂಲಕ ಸಂಭಾವ್ಯ ಅಪಾಯ ತಪ್ಪಿಸಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಪಾದಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜನತೆ ಅವರವರ ಶ್ರದ್ಧಾ, ಭಕ್ತಿಗನುಗುಣವಾಗಿ ದೇವರನ್ನು ನಂಬುತ್ತಾರೆ. ನಂಬಿದವರನ್ನು ಮಂಜುನಾಥ ಸ್ವಾಮಿ ಖಂಡಿತಾ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಅಂತೆಯೇ ಫಲವೂ ಪ್ರಾಪ್ತಿಯಾಗುತ್ತದೆ. ನಮಗೆ ಲಭಿಸಿರುವ ಈ ಶ್ರೇಷ್ಠ ಜೀವನವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಗೆ 4 ಲಕ್ಷ ಸದಸ್ಯರ ಸೇರ್ಪಡೆ: ಪ್ರಸಕ್ತ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 40 ಸಾವಿರ ಸಂಘಗಳು ಹೊಸದಾಗಿ ಸೇರ್ಪಡೆಯಾಗಿದ್ದು, 4 ಲಕ್ಷ ಮಂದಿ ಹೊಸದಾಗಿ ಯೋಜನೆಗೆ ಸೇರ್ಪಡೆಯಾದಂತಾಗಿದೆ ಎಂದರು.