ಮಂಗಳೂರು:ತಲಪಾಡಿಯಲ್ಲಿರುವ ಕಾಸರಗೋಡು ಗಡಿ ಬಗ್ಗೆ ಚರ್ಚೆ ನಡೆಯುತ್ತಿದೆ. ಗಡಿಯನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೆಲ ಜನಪ್ರತಿನಿಧಿಗಳು ಸುಪ್ರೀಂಕೋರ್ಟ್ಗೆ ದಾವೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಕೂಡ ಅನುಭವಿ ವಕೀಲರ ಮೂಲಕ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡುವಂತಹ ವಿಚಾರವನ್ನು ಮಾಡುತ್ತಿದ್ದೇವೆ. ಗಡಿ ಮುಚ್ಚಲು ರಾಜ್ಯದ ಸಿಎಂ ಕೂಡ ಸಹಮತ ನೀಡಿದ್ದಾರೆ. ಈ ಬಗ್ಗೆ ದ.ಕ.ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.
ದ.ಕ.ಜಿಲ್ಲೆಯಲ್ಲಿ 2.71 ಲಕ್ಷ ಕುಟುಂಬಗಳ ಬಿಪಿಎಲ್ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಿಸುವ ಕಾರ್ಯ ಆರಂಭಗೊಂಡಿದೆ. ಅಲ್ಲದೇ ರೇಷನ್ ಅಂಗಡಿಗಳಿಂದ ದೂರವಾಣಿ ಕರೆ ಬಂದವರು ಮಾತ್ರ ಹೋದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಕುಟುಂಬದ ಒಬ್ಬ ಸದಸ್ಯನಿಗೆ ಎರಡು ತಿಂಗಳ ಪಡಿತರ ಒಟ್ಟು 10 ಕೆಜಿ ದೊರೆಯುತ್ತದೆ. ಹೆಚ್ಚು ಜನರಿರುವ ಕುಟುಂಬಗಳಿಗೆ ಕ್ವಿಂಟಲ್ವರೆಗೂ ಅಕ್ಕಿ ದೊರಕುತ್ತದೆ. ಅಂತಹ ಸಂದರ್ಭದಲ್ಲಿ ನ್ಯಾಯಬೆಲೆಯ ಅಂಗಡಿದಾರರೇ ಪಡಿತರ ಚೀಡಿದಾರರಿಗೆ ವಾಹನಗಳ ಮೂಲಕ ಪಡಿತರ ಸಾಗಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಯಾವುದಾದರೂ ತೊಂದರೆಗಳಾದಲ್ಲಿ ಜಿಲ್ಲಾಧಿಕಾರಿಯವರ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಆಶಾಕಾರ್ಯಕರ್ತೆಯರು ಮನೆ ಮನೆಗೆ ಕೊರೊನಾ ಜಾಗೃತಿ ಮೂಡಿಸಲು ಬಂದಲ್ಲಿ ಸಾರ್ವಜನಿಕರು ಗೌರವದಿಂದ ನಡೆದುಕೊಳ್ಳಬೇಕು. ಅಲ್ಲದೆ ವೈದ್ಯರು, ನರ್ಸ್ ಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸರೊಂದಿಗೆ ಸಹಾನುಭೂತಿಯಿಂದ ವರ್ತಿಸಿ. ಯಾವುದೇ ಕಾರಣಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಕರಣಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ದ.ಕ.ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು ಯಾವುದೇ ಕೊರೊನಾ ಸೋಂಕು ದೃಢಗೊಂಡ ಪ್ರಕರಣಗಳು ದಾಖಲಾಗಿಲ್ಲ ಎಂಬುದು ಸಮಾಧಾನದ ಸಂಗತಿ. ಆದರೆ ಜಿಲ್ಲೆಯಲ್ಲಿ ಅನಗತ್ಯವಾಗಿ ವಾಹನಗಳ ಮೂಲಕ ಸಂಚಾರ ನಡೆಸುವ ಪ್ರಕರಣಗಳು ಕಂಡು ಬಂದಿರೋದರಿಂದ ಖಾಸಗಿ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಆದೇಶ ನೀಡಲಾಗಿದೆ. ಆದರೆ, ಮೆಡಿಕಲ್ ಹಾಗೂ ವೈದ್ಯಕೀಯ ಸೇವೆಗಳ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಭಾರತದಿಂದ ಕೊರೊನಾ ಸೋಂಕು ಓಡಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇಡೀ ಭಾರತ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಪ್ರಿಲ್ 5 ಭಾನುವಾರದಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪವನ್ನು ಬೆಳಗಿಸಬೇಕು ಎಂಬ ಪ್ರಧಾನಿಯವರ ಕರೆಗೆ ಸಹಕರಿಸಿ, ಕೊರೊನಾವನ್ನು ಓಡಿಸೋಣ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.